ಕÀಣಿವೆ, ನ. 26: ಹತ್ತು ದೇವರ ಪೂಜಿಸುವದಕ್ಕಿಂತ ಹೆತ್ತ ತಾಯಿಯನ್ನು ಪೂಜಿಸು ಎಂದು ಭಗವದ್ಗೀತೆ ಹೇಳಿದರೆ, ತಂದೆ-ತಾಯಿಯ ಪಾದದ ಕೆಳಗೆ ದೇವರನ್ನು ಕಾಣು ಎಂದು ಕುರಾನ್ ಹೇಳುತ್ತೆ. ಸೃಷ್ಠಿಕರ್ತನನ್ನು ಹೆತ್ತವರನ್ನು ಆರಾಧಿಸುವಲ್ಲಿ ಕಾಣು ಎಂದು ಬೈಬಲ್ ಹೇಳುತ್ತೆ.
ಇಂದಿನ ಆಧುನಿಕ ಜಗತ್ತಿನಲ್ಲಿ ಸಂಸ್ಕಾರಗಳನ್ನು ಗಾಳಿಗೆ ತೂರಿರುವ ಕೆಲವರು ಧನಿಕ ಮಕ್ಕಳು ತಮ್ಮ ತಮ್ಮ ಹೆಂಡತಿ ಮತ್ತು ಮಕ್ಕಳ ಬದುಕಿಗೆ ಮೋಜಿನಾಟಕ್ಕೆ ವಯಸ್ಸಾದ ಹೆತ್ತವರು ಅಡ್ಡಿಯಾಗುತ್ತಿದ್ದಾರೆ ಎಂದು ಭಾವಿಸಿ ಹೆತ್ತವರನ್ನು ತಮ್ಮ ಸಂಗಡದಿಂದ ಸಂಕಟಕ್ಕೆ ತಳ್ಳುತ್ತಿದ್ದಾರೆ. ಇಂತಹ ಅನಾಥ ವೃದ್ಧ ವೃದ್ಧೆಯರಿಗೆ ಆಶ್ರಯ ಕೊಟ್ಟು ಭಾವನಾತ್ಮಕವಾಗಿ ಹಾಗೂ ಕೌಟುಂಬಿಕವಾದ ವಾತಾವರಣ ಕಲ್ಪಿಸುವ ಉದ್ದೇಶದಿಂದ ಮತ್ತು ಬಲವಂತವಾಗಿ ಮನೆಯಿಂದ ತಳ್ಳಲ್ಪಟ್ಟ ಅಸಹಾಯಕರಿಗೆ ಆಶ್ರಯ ಕಲ್ಪಿಸಲು ಇತ್ತೀಚಿನ ವರ್ಷಗಳಲ್ಲಿ ವೃದ್ಧಾಶ್ರಮಗಳು ಆರಂಭವಾಗುತ್ತಿರು ವದು ವಿಪರ್ಯಾಸದ ಸಂಗತಿಯಾಗಿದೆ. ಕೂಡಿಗೆಯಲ್ಲಿರುವ ಶ್ರೀ ಶಕ್ತಿ ವೃದ್ಧಾಶ್ರಮಕ್ಕೆ ಆರ್ಥಿಕವಾಗಿ ಸ್ಥಿತಿವಂತರಾಗಿರುವ ಮಕ್ಕಳೆ ತಮ್ಮ ಪೋಷಕರನ್ನು ಸೇರಿಸುತ್ತಿರುವದಾಗಿ ತಿಳಿದು ಬಂದಿದೆ.
ಕುಶಾಲನಗರದ ಪ್ರಖ್ಯಾತ ಬುಕ್ಸ್ಟಾಲ್ ಮಾಲೀಕರೊಬ್ಬರು ತಮ್ಮ ತಾಯಿಯನ್ನು ಸರಿಯಾಗಿ ನೋಡಿ ಕೊಳ್ಳದ ಕಾರಣ ಆ ತಾಯಿಯ ಸ್ಥಿತಿ ನೋಡಲಾರದ ಬೇರೊಬ್ಬ ವ್ಯಕ್ತಿ ಕೂಡಿಗೆಯ ವೃದ್ಧಾಶ್ರಮಕ್ಕೆ ತಂದು ಸೇರಿಸಿದ್ದಾರೆ. ಅದೇ ರೀತಿಯಲ್ಲಿ ದೊಡ್ಡಹೊಸೂರಿನ ವ್ಯಕ್ತಿಯೊಬ್ಬ ತಾನು ಹಣಕಾಸು ವ್ಯವಹಾರ ಮಾಡುತ್ತಿದ್ದರೂ ತಾಯಿಯನ್ನು ಸರಿಯಾಗಿ ನೋಡಿಕೊಳ್ಳಲಾರದೇ ಆ ತಾಯಿ ಕೂಡಿಗೆ ವೃದ್ಧಾಶ್ರಮದಲ್ಲಿ ನೆಲೆ ಕಂಡುಕೊಂಡಿದ್ದಾರೆ.
ಇನ್ನು ಮೈಸೂರಿನಲ್ಲಿ ಬಟ್ಟೆ ಅಂಗಡಿಯ ಮಾಲೀಕನೊಬ್ಬ ತನ್ನ ತಂದೆಯನ್ನು ವೃದ್ಧಾಶ್ರಮಕ್ಕೆ ದೂಡಿ ಮೈ ಮರೆತಿದ್ದ. ಕೊನೆಗೆ ಆ ವೃದ್ಧ ಅನಾರೋಗ್ಯಕ್ಕೆ ಸಿಲುಕಿ ಮೃತಪಟ್ಟರೂ ಕೂಡ ಶವ ಸಂಸ್ಕಾರಕ್ಕೂ ಮಕ್ಕಳು ಬರಲಿಲ್ಲ. ಕೊನೆಗೆ ವೃದ್ಧಾಶ್ರಮದ ವ್ಯವಸ್ಥಾಪಕ ಚಂದ್ರು ಎಂಬವರು ಕಾದು ಕಾದು ಬೇಸತ್ತು ಮಡಿಕೇರಿಯ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಶವವನ್ನು ನೀಡಿದರು. ಇನ್ನು ಅಪ್ಪಂಗಳದ ತೋಟ ಮಾಲೀಕ ರೊಬ್ಬರು ತಮ್ಮ ತಾಯಿ ಹೊರೆಯಾಗಿ ದ್ದಾರೆ ಎಂದು ಇದೇ ವೃದ್ಧಾಶ್ರಮದ ಪಾಲಾಗಿಸಿದ್ದಾರೆ.
ಈ ವೃದ್ಧಾಶ್ರಮದಲ್ಲಿ 24 ಮಂದಿ ನಿರ್ಗತಿಕ ನೊಂದವರಿದ್ದಾರೆ. ಈ ಪೈಕಿ 16 ಮಂದಿ ತಾಯಂದಿರಿದ್ದಾರೆ. 9 ಮಂದಿ ವೃದ್ಧರಿದ್ದಾರೆ. ಮೈಸೂರು ಜಿಲ್ಲೆಯ ಮೂವರು, ಹಾಸನ ಜಿಲ್ಲೆಯ ಒಬ್ಬರನ್ನು ಹೊರತುಪಡಿಸಿದರೆ ಉಳಿದ 20 ಮಂದಿ ಕೊಡಗು ಜಿಲ್ಲೆಯವರೇ ಎಂಬದು ಇಲ್ಲಿ ವಿಷಾದದ ಸಂಗತಿ. ಮಡಿಕೇರಿಯ ತ್ಯಾಗರಾಜ ಕಾಲೋನಿ ಯಲ್ಲಿರುವ ವೃದ್ಧಾಶ್ರಮದಲ್ಲೂ 25 ಮಂದಿ ಇದ್ದಾರೆ. ಸದ್ಯಕ್ಕೆ ಕೊಡಗು ಜಿಲ್ಲೆಯಲ್ಲಿ ಕೂಡಿಗೆ ಹಾಗೂ ಮಡಿಕೇರಿ ಎರಡು ಕಡೆಗಳಲ್ಲಿ ವೃದ್ಧಾಶ್ರಮಗಳಿದ್ದು, 50 ಮಂದಿ ನತದೃಷ್ಟರು ಆಶ್ರಯ ಪಡೆದಿದ್ದಾರೆ.
ಕೂಡಿಗೆಯಲ್ಲಿ ಕಳೆದ 2013ರಲ್ಲಿ ಶ್ರೀ ಶಕ್ತಿ ವೃದ್ಧಾಶ್ರಮವನ್ನು ಹರಿಹರದ ಸಮಾಜ ಸೇವಕ ಶಶಿಕುಮಾರ್ ಆರಂಭಿಸಿದರು. ಅಂದಿನಿಂದ ಇಂದಿನತನಕ ಕೂಡಿಗೆಯ ಮುಖ್ಯ ರಸ್ತೆಯ ಶ್ರೀ ಸತ್ಯನಾರಾಯಣ ಅಕ್ಕಿ ಗಿರಣಿಯ ಆವರಣದಲ್ಲಿ ಬಾಡಿಗೆಯ ಕರಾರಿನಲ್ಲಿ ನಡೆಯುತ್ತಿದೆ. ಈ ವೃದ್ಧಾಶ್ರಮದಲ್ಲಿ ಈಗ 27 ಮಂದಿಗೆ ಆಸರೆ ಕಲ್ಪಿಸುವ ಅನುಕೂಲ ಮಾಡಿಕೊಳ್ಳಲಾಗಿದೆ.
ಈ ಆಶ್ರಮದ ಆರಂಭದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ವತಿಯಿಂದ ಎರಡು ಲಕ್ಷ ರೂಗಳನ್ನು, ನಂತರದ ವರ್ಷದಲ್ಲಿ ಒಂದು ಲಕ್ಷ ರೂ. ಅನುದಾನ ಕೊಡಲಾಗಿದೆ. ಉಳಿದಂತೆ ಕಳೆದ ಮೂರು ವರ್ಷಗಳಿಂದ 8 ಲಕ್ಷ ರೂಗಳ ಅನುದಾನ ನೀಡಲಾಗುತ್ತಿದೆ.
ಈ ವೃದ್ಧಾಶ್ರಮದಲ್ಲಿ ಕಟ್ಟಡ ಬಾಡಿಗೆ, ಸಿಬ್ಬಂದಿ ವೇತನ ಮತ್ತಿತರೇ ಖರ್ಚು ಮಾಸಿಕ 75 ಸಾವಿರ ರೂ. ವ್ಯಯವಾಗುತ್ತಿದೆ ಎಂದು ವೃದ್ಧಾಶ್ರಮದ ವ್ಯವಸ್ಥಾಪಕ ಚಂದ್ರು ವಿವರಿಸುತ್ತಾರೆ.
ವೃದ್ಧಾಶ್ರಮವನ್ನು ತುಂಬಾ ಶಿಸ್ತು ಹಾಗೂ ಸ್ವಚ್ಛಂದವಾಗಿ ನಿರ್ವಹಿಸ ಲಾಗುತ್ತಿದೆ. ಸ್ವಂತ ಕಟ್ಟಡ ಇದ್ದರೆ ಇನ್ನೂ ತುಂಬಾ ಅಚ್ಚುಕಟ್ಟಾಗಿ ನಿರ್ವಹಿ ಸಬಹುದು. ಇಲ್ಲಿನ ವಯೋವೃದ್ಧರು ಹಾಗೂ ಅಸಹಾಯಕರನ್ನು ನಾವು ಮಾತೃ ಪ್ರೇಮದಿಂದಲೇ ಕಾಣುತ್ತಿದ್ದೇವೆ.
ಗಡ್ಡ ಮತ್ತು ತಲೆ ಕೂದಲನ್ನು ಖುದ್ದು ನಾನೇ ತೆಗೆದು ಸ್ನಾನ ಮಾಡಿಸುತ್ತೇನೆ ಎನ್ನುತ್ತಾರೆ ಚಂದ್ರು. ಪ್ರಸ್ತುತ ಕೂಡಿಗೆ ವೃದ್ಧಾಶ್ರಮದಲ್ಲಿ ವೀರಾಜಪೇಟೆ, ಶಿರಂಗಾಲ, ಸುಂಟಿಕೊಪ್ಪ, ಕುಟ್ಟ, ಮೂರ್ನಾಡು, ಕುಶಾಲನಗರ, ನಾಪೋಕ್ಲು, ಗುಡ್ಡೆಹೊಸೂರು, ತೊರೆನೂರು, ಗರಗಂದೂರು, ಹಾಸನ, ಬೆಟ್ಟದಪುರ, ಸೋಮವಾರಪೇಟೆ, ಸಕಲೇಶಪುರ, ಮಡಿಕೇರಿ, ದೊಡ್ಡಹೊಸೂರು, ಚಿಕ್ಕಬೆಟಗೇರಿ, ಶನಿವಾರಸಂತೆಯ ವೃದ್ಧರು ಆಶ್ರಯ ಪಡೆದಿದ್ದಾರೆ.
ಸಂಘ ಸಂಸ್ಥೆಗಳು ಹಾಗೂ ದಾನಿಗಳು ಈ ವೃದ್ಧಾಶ್ರಮಕ್ಕೆ ಅಗತ್ಯ ನೆರವು ಹಾಗೂ ಸಹಕಾರ ನೀಡಿದರೆ ಇಲ್ಲಿ ಇರುವ ಆಶ್ರಿತರನ್ನು ಮತ್ತಷ್ಟು ಪ್ರೇಮದಿಂದ ನೋಡಿಕೊಂಡು ಅವರಲ್ಲಿ ನಾನು ಒಂಟಿಯಲ್ಲ ಎಂಬ ಅನಾಥ ಪ್ರಜ್ಞೆಯನ್ನು ದೂರ ಮಾಡಬಹುದಾಗಿದೆ. ‘ಕಲ್ಲು ದೇವರಿಗೆ ಚಿನ್ನ ಹಾಕುವ ಬದಲು ಹೆತ್ತ ತಾಯಿಗೆ ಅನ್ನ ಹಾಕು’ ಎಂಬದನ್ನು ಮಂದಿ ಮರೆಯಬಾರದು ಎನ್ನುತ್ತಾರೆ ವ್ಯವಸ್ಥಾಪಕ ಚಂದ್ರು.
ವೃದ್ಧಾಶ್ರಮದಲ್ಲಿನ ಮಂದಿಗೆ ನೆರವಾಗುವ ಮನಸ್ಥಿತಿ ಉಳ್ಳವರು ಚಂದ್ರು ಅವರ ಸಂಖ್ಯೆ 9632259467 ಸಂಪರ್ಕಿಸಿ ಸಹಕರಿಸಬಹುದು.
-ಕೆ.ಎಸ್. ಮೂರ್ತಿ