ವೀರಾಜಪೇಟೆ, ನ. 25: ವೀರಾಜಪೇಟೆ ನಗರದ ರಸ್ತೆ ಅಗಲೀಕರಣಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ಮನೆ ಮಾಲೀಕರ ಮನೆಗಳನ್ನು ಕೆಡವಬಾರದೆಂದು ಹೇಳಿ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ವೀರಾಜಪೇಟೆ ನಿವಾಸಿಗಳಾದ ಪಿ.ಕೆ. ಲಲಿತಾ ಹಾಗೂ ಇತರ 67 ಮಂದಿ ವೀರಾಜಪೇಟೆ ಪುರಸಭೆ ತೆಗೆದುಕೊಂಡಿರುವ ರಸ್ತೆ ಅಗಲೀಕರಣದ ಕ್ರಮವನ್ನು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಈ ಹಿಂದೆ ಐ.ಆರ್. ಪ್ರಮೋದ್ ಮತ್ತು ಇತರರು ಹಾಗೂ ಎಂ.ಕೆ. ಪೂವಯ್ಯ ಮತ್ತು ಸಜನ್ ಪೂವಯ್ಯ ದಾಖಲಿಸಿದ ರಿಟ್ ಅರ್ಜಿಯಲ್ಲಿ ನೀಡಿದಂತೆ ತಾತ್ಕಾಲಿಕ ತಡೆಯಾಜ್ಞೆ ತಮಗೂ ನೀಡಬೇಕೆಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ಪುರಸಭೆ ಪರ ವಕೀಲರು ಅರ್ಜಿದಾರರು ರಸ್ತೆಯನ್ನು ಅಕ್ರಮಿಸಿಕೊಂಡು ಮನೆ ಕಟ್ಟಿರುತ್ತಾರೆ. ರಸ್ತೆಯ ಅಗಲೀಕರಣಕ್ಕೆ ತೊಂದರೆಯಾಗುತ್ತಿದೆ. ಹಲವಾರು ನಿವಾಸಿಗಳಿಗೆ ಈ ಬಗ್ಗೆ ನೋಟೀಸ್ ನೀಡಲಾಗಿದೆ ಎಂದು ವಾದಿಸಿದರು. ನ್ಯಾಯಾಮೂರ್ತಿ ಬಿ. ವೀರಪ್ಪ ಅವರು ಈ ಬಗ್ಗೆ ಲಿಖಿತ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಹೇಳಿ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ. ಪ್ರಕರಣದ ವಿಚಾರಣೆಯು ನ್ಯಾಯಾಲಯದ ಮುಂದೆ ಯಾವದೇ ಸಂದರ್ಭದಲ್ಲಿ ಬರಲಿದೆ.