ಮಡಿಕೇರಿ, ನ. 25: ನಿನ್ನೆ ಭಾಗಮಂಡಲ ಹೊರವಲಯದ ತಲಕಾವೇರಿ ಮಾರ್ಗ ಬದಿಯ ಅಂಗಡಿಯಲ್ಲಿದ್ದ; ಒಂಟಿ ಮಹಿಳೆಯ ಕುತ್ತಿಗೆ ಸರದೊಂದಿಗೆ ಮೊಬೈಲ್ ಕಸಿದುಕೊಂಡು ಪರಾರಿಯಾಗಿರುವ ಸರಗಳ್ಳರ ಪತ್ತೆಗೆ ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಿ.ಪಿ. ದಿನೇಶ್, ವೃತ್ತ ನಿರೀಕ್ಷಕ ದಿವಾಕರ್ ಹಾಗೂ ಪೊಲೀಸ್ ಠಾಣಾಧಿಕಾರಿಗಳಾದ ಮಹದೇವ್ ಮತ್ತು ಚಂದ್ರಶೇಖರ್ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳು ಬೇರೆ ಬೇರೆ ಮೂಲಗಳಿಂದ ಮಾಹಿತಿ ಸಂಗ್ರಹಿಸುತ್ತಿವೆ.
ಅಲ್ಲದೆ; ಪಿ.ಡಿ. ರವಿನ್ ಮುತ್ತಣ್ಣ ಅವರ ಅಂಗಡಿಯಲ್ಲಿದ್ದ ಒಂಟಿ ಮಹಿಳೆ ಪೂಜಾ ಚೇತನ್ ಅವರ ಬಳಿ ನಿನ್ನೆ ದುಷ್ಕøತ್ಯ ಎಸಗುವ ಮುನ್ನ ಆರೋಪಿಗಳಿಬ್ಬರು; ಪರಸ್ಪರ ಮಲೆಯಾಳಂನಲ್ಲಿ ಮಾತನಾಡುತ್ತಿ ದ್ದರೂ; ಮಹಿಳೆಯೊಂದಿಗೆ ಕನ್ನಡದಲ್ಲಿ ವ್ಯವಹರಿಸಿದ್ದಾರೆ ಎಂದು ದೃಢಪಟ್ಟಿದೆ.
ಹೀಗಾಗಿ ಆರೋಪಿಗಳು ಕೊಳಗದಾಳು ಮಾರ್ಗದಲ್ಲಿ ಬಿಟ್ಟು ಹೋಗಿರುವ ಸ್ಕೂಟರ್ ಯಾವದೇ ರಿಜಿಸ್ಟ್ರೇಷನ್ ಹೊಂದಿಲ್ಲವಾದ್ದರಿಂದ; ಈ ವಾಹನದಲ್ಲಿರುವ ಇಂಜಿನ್ ಸಂಖ್ಯೆ ಇತ್ಯಾದಿಯ ಮಾಹಿತಿ ಅಡಿಯಲ್ಲಿ ಪೊಲೀಸರು ಕಳ್ಳರ ಜಾರು ಕಂಡು ಹಿಡಿಯಲು ಮುಂದಾಗಿದ್ದಾರೆ.
ಅಲ್ಲದೆ ಚೇರಂಬಾಣೆಯಲ್ಲಿ ಸಾರ್ವಜನಿಕರು ಈ ಚೋರರು ಬರುತ್ತಿದ್ದ ಸ್ಕೂಟರ್ ಅನ್ನು ಅಡ್ಡಗಟ್ಟಿದ್ದರಿಂದ; ಕೊಳಗದಾಳು ರಸ್ತೆಗಾಗಿ ಕಾಡಿನೊಳಗೆ ತಪ್ಪಿಸಿಕೊಂಡಿರುವ ಹಿನ್ನೆಲೆ; ಆ ಮೂಲಕ ಸುಳ್ಯ ಅಥವಾ ಕೇರಳದೆಡೆಗೆ ತೆರಳಿರುವ ಶಂಕೆ ಇದೆ. ಅಲ್ಲದೆ ಈ ಕಳ್ಳರ ಮೊಬೈಲ್ ಸಂಭಾಷಣೆಯ ಜಾಡು ಮೇರೆಗೆ ಪೊಲೀಸರು ವ್ಯಾಪಕ ತಪಾಸಣೆ ಕೈಗೊಂಡಿದ್ದಾರೆ.
 
						