ಪೆರಾಜೆ, ನ. 26: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪುತ್ಯ ಪೆರಾಜೆ 60 ವರ್ಷ ಪೂರೈಸಿದ ಸವಿ ನೆನಪಿಗಾಗಿ ವಾರ್ಷಿಕೋತ್ಸವ ಸಮಾರಂಭವು ಶಾಲಾ ರಂಗಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆಯ ಮಾಜಿ ಮೊಕ್ತೇಸರರಾದ ಪಿ.ಎಂ. ಬೋಜಪ್ಪ ಪೆರುಮುಂಡ ಅವರು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಯತೀಶ ಎಂ. ನಿಡ್ಯಮಲೆ ಅವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿಧರಣೀಧರ, ಪಂಚಾಯಿತಿ ಸದಸ್ಯೆ ಪದ್ಮಾವತಿ ತಿರುಮಲೇಶ್ವರ, ವಿಜಯಕುಮಾರ ನಿಡ್ಯಮಲೆ, ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಮೋನಪ್ಪ ನಿಡ್ಯಮಲೆ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮನೋಜ್ ಕುಂಟಿಕಾನ ಉಪಸ್ಥಿತರಿದ್ದರು.

ಶಾಲಾ ವಾರ್ಷಿಕ ವರದಿಯನ್ನು ಶಾಲಾ ಮುಖ್ಯೋಪಾಧ್ಯಾಯ ಪದ್ಮಯ್ಯ ಮಾಸ್ಟರ್ ಹಾಗೂ ಶಾಲಾ ಎಸ್.ಡಿ.ಎಂ.ಸಿ.ಯ ವರದಿಯನ್ನು ಮಾಜಿ ಅಧ್ಯಕ್ಷ ಪಿ.ಕೆ. ಜಯರಾಮ ಪೆರುಮುಂಡ ವಾಚಿಸಿದರು.

ಈ ಸಂದರ್ಭ ಅತಿಥಿ ಶಿಕ್ಷಕ ಹಾಗೂ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಶಾಲಾ ವಿಧ್ಯಾರ್ಥಿಗಳು ಪ್ರಾರ್ಥಿಸಿ, ಶಾಲಾ ಶಿಕ್ಷಕ ಮೋಹನ ಮಾಸ್ತರ್ ಪೆರುಮುಂಡ ಸ್ವಾಗತಿಸಿ, ಮೋಹನ್ ಪಡ್ಪು ಹಾಗೂ ಮೋಹನ್ ಪೆರುಮುಂಡ ಅವರ ನಿರೂಪಣೆಯೊಂದಿಗೆ ಪಿ.ಕೆ. ಜಯರಾಮ್ ಪೆರುಮುಂಡ ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ಹಿರಿಯ ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು, ಬಹುಮಾನ ವಿತರಣೆ, ರಾತ್ರಿ ಶಾಲಾ ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿ, ಗ್ರಾಮಸ್ಥರಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

- ಕಿರಣ್ ಕುಂಬಳಚೇರಿ