ಮಡಿಕೇರಿ, ನ. 25: ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ದೇಶದ ಸಂವಿಧಾನಕ್ಕೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿ ನಗರದಲ್ಲಿಂದು ಸಂವಿಧಾನ ರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ದಲಿತ ಪರ ಸಂಘಟನೆಗಳ ಬೆಂಬಲದೊಂದಿಗೆ ಬೃಹತ್ ಪ್ರತಿಭಟನೆ ನಡೆಯಿತು.ನಗರದ ಸುದರ್ಶನ ವೃತ್ತದಿಂದ ಜ.ತಿಮ್ಮಯ್ಯ ವೃತ್ತದವರೆಗೆ ಮೆರವಣಿಗೆ ನಡೆಸಿ, ಜ.ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸಂವಿಧಾನ ವಿರೋಧಿ ಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡು ಡಾ. ಅಂಬೇಡ್ಕರ್ ಅವರ ಆದರ್ಶ ಮತ್ತು ವಿಚಾರಧಾರೆಗಳನ್ನು ಮರೆಮಾಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರತಿಭಟನಾ ಕಾರರು ಕಿಡಿಕಾರಿದರು. ಈ ಸಂದರ್ಭ ಮಾತನಾಡಿದ ದಲಿತಪರ ಸಂಘಟನೆ ಮುಖಂಡ ಡಿ.ಎಸ್. ನಿರ್ವಾಣಪ್ಪ, ಸಂವಿಧಾನ ವನ್ನು ಕಿತ್ತುಹಾಕುವ ಮನಸ್ಥಿತಿ ಇರುವವರು ಇಂದು ಅಧಿಕಾರಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು. ಹಲವು ಬಾರಿ ಸಂವಿಧಾನ ಕರಡನ್ನು ಸುಡುವ
(ಮೊದಲ ಪುಟದಿಂದ) ಮೂಲಕ ಅದನ್ನು ತೆಗೆಯುವದಕ್ಕೆ ಬಂದಿದ್ದೇವೆ ಎನ್ನುವ ಸಂದೇಶವನ್ನು ನೀಡಲು ಹೊರಟಿ ದ್ದಾರೆ. ಎಲ್ಲಾದರೂ ಸಂವಿಧಾನವನ್ನು ಮುಟ್ಟಿದರೆ ಉಗ್ರ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.
ಬಹುಜನ ಸಮಾಜ ಪಕ್ಷದ ಮುಖಂಡ ಮೋಹನ್ ಮೌರ್ಯ ಮಾತನಾಡಿ, ಸಂವಿಧಾನವನ್ನು ಬರೆದಿರುವದು ಡಾ. ಬಿ.ಆರ್. ಅಂಬೇಡ್ಕರ್ ಎಂದು ಪ್ರಪಂಚದ ಎಲ್ಲಾ ಜನತೆಗೂ ತಿಳಿದಿದೆ. ಆದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಒಂದು ಸಣ್ಣ ಮಾಹಿತಿಯನ್ನೂ ಪಡೆಯದೆ ಸಂವಿಧಾನವನ್ನು ರಚನೆ ಮಾಡಿಲ್ಲ ಎಂಬ ಸುತ್ತೋಲೆ ಹೊರಡಿಸಿರುವದನ್ನು ವಿರೋಧಿಸಿ ಹೋರಾಟ ಮಾಡಲಾಗುತ್ತಿದೆ ಎಂದರು.
ಸಮಾನ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಸಂವಿಧಾನವನ್ನು ರಚಿಸಲಾಗಿದೆ. ಆದರೆ ಆಳುವ ಸರ್ಕಾರಗಳು ಸಂವಿಧಾನವನ್ನು ಸರಿಯಾಗಿ ಜಾರಿ ಮಾಡದ ಪರಿಣಾಮ ಇಂದು ಸಂವಿಧಾನವನ್ನು ದೂಷಣೆ ಮಾಡುವ ಕೆಲಸವನ್ನು ಕಿಡಿಗೇಡಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದ್ದು, ಸಂವಿಧಾನ ಉಳಿದರೆ ಮಾತ್ರ ದೇಶ ಉಳಿಯುತ್ತದೆ. ಆ ನಿಟ್ಟಿನಲ್ಲಿ ಸಂವಿಧಾನವನ್ನು ಉಳಿಸಿ, ಮನುವಾದ ಅಳಿಸಿ, ದೇಶವನ್ನು ರಕ್ಷಣೆ ಮಾಡಿ ಎನ್ನುವ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಸಂವಿಧಾನ ರಕ್ಷಣಾ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಎಂ. ನಂದಕುಮಾರ್, ದಲಿತಪರ ಸಂಘಟನೆಗಳ ಮುಖಂಡರಾದ ಜಯಪ್ಪ ಹಾನಗಲ್, ಹೆಚ್.ಎಲ್. ದಿವಾಕರ್, ಹೆಚ್.ವಿ. ಜಯಮ್ಮ, ದೀಪಕ್, ಕೃಷ್ಣಪ್ಪ, ಸೋಮಪ್ಪ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.