ಸೋಮವಾರಪೇಟೆ, ನ. 25: ಕೊಡಗು-ಹಾಸನ ಗಡಿಯಲ್ಲಿ ಮುಂದುವರೆದಿರುವ ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ತಾ. 28ರಂದು ಜಿಲ್ಲೆಯ ಗಡಿ ಮಲ್ಲಿಪಟ್ಟಣ ಬಂದ್ ಹಾಗೂ ರಾಜ್ಯಹೆದ್ದಾರಿ ತಡೆ ನಡೆಸಲಾಗುವದು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಹಾಸನ ಜಿಲ್ಲಾ ನಿರ್ದೇಶಕ ಹೆಚ್.ಎನ್. ವೆಂಕಟೇಶ್ ತಿಳಿಸಿದರು.
ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಗಡಿಗ್ರಾಮಗಳಾದ ಚಿಕ್ಕಭಂಡಾರ, ಬೆಸೂರು, ನಿಲುವಾಗಿಲು, ಆಗಳಿ, ಕಟ್ಟೇಪುರ, ಜನಾರ್ಧನಹಳ್ಳಿ, ದೊಡ್ಡಭಂಡಾರ, ಕೋಣಿಗನಹಳ್ಳಿ, ಕೆಳಕೊಡ್ಲಿ, ಚಿಕ್ಕಕುಂದ, ಹಿಪ್ಪಗಳಲೆ ಸೇರಿದಂತೆ ಹಾಸನ ಜಿಲ್ಲೆಗೆ ಒಳಪಟ್ಟ ಹತ್ತಾರು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದರೂ ಎರಡೂ ಜಿಲ್ಲೆಗಳ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಈ ಭಾಗದಲ್ಲಿ ಕಾಫಿ, ಭತ್ತ, ಜೋಳ, ಅಡಕೆ, ರಾಗಿ, ಮೆಣಸು ಬೆಳೆಗಾರರು ಈ ಹಿಂದಿನ 2-3ವರ್ಷಗಳಲ್ಲಿ ಅತೀವೃಷ್ಟಿ ಹಾಗೂ ಬರಗಾಲದಿಂದ ತತ್ತರಿಸಿದ್ದು, ಇದೀಗ ಕಾಡಾನೆಗಳ ಹಾವಳಿಯಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಆತ್ಮಹತ್ಯೆಗೆ ಆಲೋಚಿಸುತ್ತಿದ್ದಾರೆ. ಪರಿಸ್ಥಿತಿ ಇಷ್ಟೊಂದು ಗಂಭೀರವಾಗಿದ್ದರೂ ಕಾಡಾನೆಗಳ ಹಾವಳಿ ತಡೆಗೆ ಇಲಾಖೆ ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾಸನ ಜಿಲ್ಲೆಯ ಮಲ್ಲಿಪಟ್ಟಣ ಮತ್ತು ಕೊಡಗಿನ ಕೊಡ್ಲಿಪೇಟೆ ಹೋಬಳಿಗಳಲ್ಲಿ 50ಕ್ಕೂ ಅಧಿಕ ಕಾಡಾನೆಗಳು ಬೀಡುಬಿಟ್ಟಿದ್ದು, ನೂರಾರು ಎಕರೆ ಕೃಷಿ ನಷ್ಟವಾಗುತ್ತಿದೆ. ಅರಣ್ಯದ ಸುತ್ತಲೂ ಅವೈಜ್ಞಾನಿಕ ಕಂದಕ ನಿರ್ಮಾಣ ಮಾಡಿರುವದರಿಂದ ಇಂತಹ ಸಮಸ್ಯೆ ತಲೆದೋರಿದ್ದು, ಅರಣ್ಯ ಇಲಾಖೆ ವಾಸ್ತವಿಕವಾಗಿ ಆಲೋಚಿಸಿ ಕಾಡಾನೆಗಳ ಹಾವಳಿಗೆ ತಡೆಯೊಡ್ಡಬೇಕಾಗಿದೆ ಎಂದು ಆಗ್ರಹಿಸಿದರು.
ತಾ. 28ರಂದು ಪೂರ್ವಾಹ್ನ 10.30ಕ್ಕೆ ಗಡಿಪ್ರದೇಶದ ಮಲ್ಲಿಪಟ್ಟಣದಲ್ಲಿ ಎರಡೂ ಜಿಲ್ಲೆಗಳ ರೈತರನ್ನು ಒಳಗೊಂಡಂತೆ ಬೃಹತ್ ಪ್ರತಿಭಟನೆ, ಮಲ್ಲಿಪಟ್ಟಣ ಬಂದ್ ಹಾಗೂ ರಾಜ್ಯ ಹೆದ್ದಾರಿ ತಡೆ ಮಾಡಲಾಗುವದು. ಇದಕ್ಕೂ ಅರಣ್ಯ ಇಲಾಖೆ ಬಗ್ಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಎರಡೂ ಜಿಲ್ಲೆಗಳ ಸಂಬಂಧಿತ ಅರಣ್ಯ ಇಲಾಖಾ ಕಚೇರಿಗಳ ಎದುರು ತೀವ್ರ ರೀತಿಯ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ವೆಂಕಟೇಶ್ ತಿಳಿಸಿದರು.
ತಾ. 28ರ ಪ್ರತಿಭಟನೆಗೆ ಮಲ್ಲಿಪಟ್ಟಣ, ಕೊಡ್ಲಿಪೇಟೆ, ಶನಿವಾರಸಂತೆ ಭಾಗದ ರೈತರು, ಕಾಫಿ ಬೆಳೆಗಾರರ ಸಂಘ ಸೇರಿದಂತೆ ಇನ್ನಿತರ ಸಂಘಸಂಸ್ಥೆಗಳು, ಆಟೋ-ಗೂಡ್ಸ್ ವಾಹನ ಚಾಲಕರು, ಅಂಗಡಿ-ಹೊಟೇಲ್ ಮಾಲೀಕರು ಮತ್ತು ಸಾರ್ವಜನಿಕರು ಬೆಂಬಲ ನೀಡಿದ್ದಾರೆ ಎಂದರು.
ಗೋಷ್ಠಿಯಲ್ಲಿ ಕೊಡ್ಲಿಪೇಟೆ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ದಿನೇಶ್, ಅರಕಲಗೂಡು ಎಪಿಎಂಸಿ ಮಾಜೀ ಉಪಾಧ್ಯಕ್ಷ ಮಾಗಲು ಬಸವರಾಜು, ಅರಕಲಗೂಡು ಪಿಎಲ್ಡಿ ಬ್ಯಾಂಕ್ ಮಾಜೀ ಅಧ್ಯಕ್ಷ ಮಾಗೋಡು ಬಸವರಾಜ್ ಅವರುಗಳು ಉಪಸ್ಥಿತರಿದ್ದರು.