ಒಡೆಯನಪುರ,ನ. 25: ಕೊಡಗು- ಹಾಸನ ಗಡಿ ಭಾಗದ ಸೋಮವಾರಪೇಟೆ ತಾಲೂಕಿಗೆ ಹೊಂದಿಕೊಂಡಿರುವ ಹೊಸೂರು ಗ್ರಾಮದ ಶ್ರೀ ಬೆಟ್ಟದ ಬಸವೇಶ್ವರಸ್ವಾಮಿಯ ಕೌಟೆಕಾಯಿ ಜಾತ್ರೆ ಭಾವೈಕ್ಯತೆ ಸಂಕೇತಕ್ಕೆ ಪೂರಕವಾಗಿ ವಿಜೃಂಭಣೆಯಿಂದ ನಡೆಯಿತು.
ಕೃಷಿ, ಜಾನುವಾರು, ಜಾನುವಾರು ಗಳ ಸಗಣಿ ಗೊಬ್ಬರ ಬಳಸಿ ರೈತರು ಹಿಂದಿನ ಕಾಲದಲ್ಲಿ ಸಾವಯವ ಕೃಷಿ ಮಾಡುತ್ತಿದ್ದರು, ರೈತರು ಜಾನುವಾರು ಗಳ ಸಗಣಿಯಿಂದ ಸಾವಯವ ಗೊಬ್ಬರ ಮಾಡುವ ಸಂದರ್ಭದಲ್ಲಿ ಸಗಣಿಗೊಬ್ಬರ ಗುಂಡಿಯಲ್ಲಿ ಯಥೇಚ್ಛವಾಗಿ ಕೌಟೆಕಾಯಿ ಬೆಳೆದು ಇದರಿಂದ ಗೊಬ್ಬರ ಅಭಿವೃದ್ಧಿ ಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರೈತರು ಸಗಣಿಗೊಬ್ಬರ ವೃದ್ಧಿಗೆ ಮತ್ತು ರೈತರು ಬೆಳೆದ ಕೃಷಿ ಅಭಿವೃದ್ಧಿಗೂ ಪೂರಕವಾದ ಕೌಟೆಕಾಯಿಯನ್ನು ಭಕ್ತಿ ಭಾವದಿಂದ ಪೂಜಿಸುವ ನಿಟ್ಟಿನಲ್ಲಿ ಹೊಸೂರು ಗ್ರಾಮದ ಬೆಟ್ಟದ ಮೇಲಿರುವ ಶ್ರೀ ಬೆಟ್ಟದ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷ ದಿಪಾವಳಿ ಹಬ್ಬ ಕಳೆದು 15 ದಿನಗಳ ನಂತರ ದೇವಾಲಯ ಪ್ರವೇಶ ದ್ವಾರದಲ್ಲಿ ಕೌಟೆಕಾಯಿ ಮಾಲೆ ಮಾಡಿ ಅಲಂಕರಿಸುತ್ತಾರೆ. ಕೌಟೆಕಾಯಿಯ ತಿರುಳು ಕೊರೆದು ಅದರಲ್ಲಿ ಹಣತೆಯನ್ನು ಹಚ್ಚುತ್ತಾರೆ, ಸುಮಾರು 400 ವರ್ಷಗಳಿಂದ ಪ್ರತಿವರ್ಷವೂ ಗ್ರಾಮಸ್ಥರು ಮತ್ತು ದೇವಾಲಯ ಸಮಿತಿಯವರು ಕೌಟೆಕಾಯಿ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಹೊಸೂರು ಶ್ರೀ ಬೆಟ್ಟದ ಬಸವೇಶ್ವರ ದೇವಸ್ಥಾನ ಸಮಿತಿ, ಹೊಸೂರು ಬಸವೇಶ್ವರ ಜೆ.ಸಿ.ಐ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಶ್ರೀ ಬಸವೇಶ್ವರಸ್ವಾಮಿಯ ಕೌಟೆಕಾಯಿ ಜಾತ್ರೆಯನ್ನು ಭಾವೈಕ್ಯತೆಗೆ ಸಂಕೇತವಾಗಿ ಭಕ್ತಿಪೂರ್ವಕವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು. ದೇವಾಲಯ ಆವರಣದಲ್ಲಿ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಯಸಳೂರು ತೆಂಕಲಗೂಡು ಬೃಹನ್ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ; ಮಾನವರಲ್ಲಿ ಮಾನವ ಗುಣ, ಆಧ್ಯಾತ್ಮಿಕ ಚಿಂತನೆ, ಭಕ್ತಿ, ಜ್ಞಾನವನ್ನು ಬೆಳೆಸಿಕೊಳ್ಳುವ ಉದ್ದೇಶದಿಂದ ಜಗತ್ತಿನ ಪ್ರತಿಯೊಂದು ಧರ್ಮಗಳ ಸಂಕೇತವಾಗಿ ದೇವಸ್ಥಾನ, ಚರ್ಚ್, ಮಸೀದಿಗಳು ಸ್ಥಾಪಿತ ವಾಗಿದ್ದು; ಇವುಗಳಲ್ಲವೂ ಭಕ್ತಿ ಮತ್ತು ಆಧ್ಯಾತ್ಮಿಕತೆಯ ಸ್ಥಾನಗಳಿಸಿವೆ ಎಂದರು.
ಆಧ್ಯಾತ್ಮಿಕ ಮತ್ತು ಭಕ್ತಿಯಿಂದ ಬೌದ್ಧಿಕವಾದ ಜ್ಞಾನದ ಶಕ್ತಿ ಹೆಚ್ಚಾಗುತ್ತದೆ, ಲೌಕಿಕ ಮತ್ತು ಅಲೌಕಿಕ ಜೀವನಕ್ಕೆ ಭಕ್ತಿ ಮತ್ತು ಆಧ್ಯಾತ್ಮಿಕತೆಯ ಅವಶ್ಯಕತೆ ಇರುತ್ತದೆ, ಜೀವನದಲ್ಲಿ ಮತ್ತು ಸಮಾಜದಲ್ಲಿ ಸನ್ರ್ಮಾಗದತ್ತ ಸಾಗಲು ಸಹ ಇವುಗಳು ಪೂರಕವಾಗುತ್ತದೆ ಎಂದರು. ದೇವರ ಉತ್ಸವ ಹಾಗೂ ಗ್ರಾಮೀಣ ಸೊಗಡಿನ ಜಾತ್ರಾ ಮಹೋತ್ಸವಗಳು ಭಾವೈಕ್ಯತೆಗೆ, ಸಂಸ್ಕøತಿ, ಆಚಾರ ವಿಚಾರ ವಿನಿಮಯ ಮುಂತಾದ ಮಾನವೀಯ ಸಂಬಂಧಗಳ ಬೆಸುಗೆಗೆ ವೇದಿಕೆ ಯಾಗುತ್ತದೆ, ಇಂದಿನ ಬದಲಾದ ಸಮಾಜದಲ್ಲಿ ಹಣ ಸಂಪಾದನೆ, ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಈ ನಿಟ್ಟಿನಲ್ಲಿ ಎಲ್ಲಕ್ಕಿಂತ ಮುಖ್ಯವಾದ ಜ್ಞಾನ ಸಂಪಾದನೆ ಮತ್ತು ಅಂತರಂಗ ಸೌಂದರ್ಯಕ್ಕೆ ಹೆಚ್ಚಿನ ಒತ್ತುಕೊಡು ವಂತೆ ಸಲಹೆ ನೀಡಿದರು.
ಹೊಸೂರು ಮಸೀದಿಯ ಧರ್ಮಗುರು ಶಾಫಿಯ ಸಯ್ಯದ್ ಮಾತನಾಡಿ; ಜಾತ್ರಾ ಮಹೋತ್ಸವಗಳ ಆಚರಣೆಯಿಂದ ಎಲ್ಲಾ ಧರ್ಮ, ಜಾತಿ, ಜನಾಂಗದವರು ಒಂದೆಡೆ ಒಂದಾಗಿ ಮಾನವರ ಕುಟುಂಬದಂತೆ ಬೆರೆಯಲು ಸಾಧ್ಯವಾಗುತ್ತದೆ ಎಂದರು. ಧರ್ಮಗಳು ಪ್ರಾಣಿಯಂತೆ ಕಚ್ಚಾ ಡುತ್ತಿದ್ದ ಮನುಷ್ಯರು ಮಾನವರಾಗಿ ಬದುಕಲು ಅವಕಾಶ ಮಾಡಿಕೊಡುವ ಸಲುವಾಗಿ ಸ್ಥಾಪಿತವಾಗಿದೆ ಎಲ್ಲಾ ಧರ್ಮಗಳಲ್ಲಿ ಮಾನವ ಸಂದೇಶ ಗಳಿರುತ್ತದೆ ಆದರೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಧರ್ಮದ ಹೆಸರಿನಲ್ಲಿ ಕೋಮು ಗಲಭೆ ನಡೆಸಲು ಪ್ರಚೋದಿಸುತ್ತಿರುವದು ವಿಷಾದನೀಯ. ಈ ನಿಟ್ಟಿನಲ್ಲಿ ನಾವೆಲ್ಲರೂ ವಿಶ್ವದಲ್ಲೆ ಜಾತ್ಯತೀತ ಭಾವೈಕ್ಯತೆಗೆ ಹೆಸರುವಾಸಿಯಾದ ನಮ್ಮ ರಾಷ್ಟ್ರದ ಆಧ್ಯಾತ್ಮಿಕ, ಧಾರ್ಮಿಕ ಸಂದೇಶವನ್ನು ಪಾಲನೆ ಮಾಡಿಕೊಂಡು ಸಹೋದರತೆಯಿಂದ ಜೀವನ ನಡೆಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹೊಸೂರು ಜೆಸಿಐ ಸ್ಥಾಪಕ ಅಧ್ಯಕ್ಷ ಎಚ್.ಕೆ. ರಮೇಶ್, ಕಾರ್ಯದರ್ಶಿ ಗಣಪತಿ, ಪ್ರಮುಖರಾದ ಎಸ್.ಮಂಜುನಾಥ್, ಡಿ.ಪಿ.ರಮೇಶ್, ದೇವಾಲಯ ಸಮಿತಿ ಹಾಗೂ ಜೆಸಿಐ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಜಾತ್ರಾ ಮಹೋತ್ಸವದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವಾಲಯ ಆವರಣ ಮತ್ತು ಸುಗ್ಗಿಕಟ್ಟೆಯಲ್ಲಿ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಿತು. ದೇವಾಲಯ ಸಮಿತಿಯಿಂದ ಅನ್ನದಾನ ನಡೆಯಿತು. ಜಾತ್ರಾ ಮಹೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಈ ಸಂದರ್ಭ ಮಕ್ಕಳಿಗಾಗಿ ವಿವಿಧ ಸಾಂಸ್ಕøತಿಕ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
-ವರದಿ: ವಿ.ಸಿ.ಸುರೇಶ್ ಒಡೆಯನಪುರ