ಶ್ರೀಮಂಗಲ, ನ. 25: ದಕ್ಷಿಣ ಕೊಡಗಿನ ಬ್ರಹ್ಮಗಿರಿ ಅಭಯಾರಣ್ಯ ನಾಗರಹೊಳೆ ಮೀಸಲು ಅರಣ್ಯ ಅಂಚಿನಲ್ಲಿರುವ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕಟ್ಟಲು ಮತ್ತು ಧಾಳಿ ನಡೆಸುತ್ತಿರುವ ಕಾಡಾನೆಯನ್ನು ಗುರುತಿಸಿ ಸೆರೆಹಿಡಿಯಲು ಎರಡು ಸಾಕಾನೆಗಳನ್ನು ಬಳಸಿಕೊಂಡು ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಎರಡು ದಿನದ ಕೂಂಬಿಂಗ್ ಕಾರ್ಯಾಚರಣೆ ಸೋಮವಾರ ಸಂಜೆಗೆ ಮುಕ್ತಾಯವಾಯಿತು.
ಅರಣ್ಯ ಇಲಾಖೆ ಈ ವ್ಯಾಪ್ತಿಯ ಕುಟ್ಟ, ಮಂಚಳ್ಳಿ, ತೈಲಾ, ಕಾಯಿಮನಿ ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆಸಿದೆ. ಮತ್ತಿಗೋಡು ಸಾಕಾನೆ ಶಿಬಿರದಿಂದ ಅಭಿಮನ್ಯು ಮತ್ತು ಗೋಪಾಲಸ್ವಾಮಿ ಎಂಬ ಸಾಕಾನೆಗಳನ್ನು ಕೂಂಬಿಂಗ್ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದ್ದು, ಕಾಫಿ ತೋಟದಲ್ಲಿ ಸೇರಿಕೊಂಡಿದ್ದ ಕಾಡಾನೆ ಹಿಂಡುಗಳನ್ನು ಸಮೀಪದ ಬ್ರಹ್ಮಗಿರಿ ಅಭಯಾರಣ್ಯಕ್ಕೆ ಅಟ್ಟಲಾಗಿದೆ.
ತಾ. 21ರಂದು ಕುಟ್ಟ ಗ್ರಾಮದಲ್ಲಿ ಹಾಡಹಗಲೇ ವ್ಯಕ್ತಿಯೋರ್ವನನ್ನು ತುಳಿದು ಕೊಂದ ಬೆನ್ನಲ್ಲೇ ಕಾಡಾನೆ ಕಾರ್ಯಾಚರಣೆಯನ್ನು ಗಂಭೀರವಾಗಿ ಪರಿಗಣಿಸಿ ಅರಣ್ಯ ಇಲಾಖೆ ಕೂಂಬಿಂಗ್ ನಡೆಸಿದೆ. ಕೂಂಬಿಂಗ್ನಲ್ಲಿ ಮುಖ್ಯವಾಗಿ ದಾಳಿ ನಡೆಸಿದ ಕಾಡಾನೆಯನ್ನು ಗುರುತಿಸಿ ಅದನ್ನು ಖೆಡ್ಡಕ್ಕೆ ಹಸ್ತಾಂತರಿಸಲು ಈ ಕ್ರಮ ಕೈಗೊಳ್ಳಲಾಗಿತ್ತು.
ನಾಗರಹೊಳೆ ಮತ್ತು ಬ್ರಹ್ಮಗಿರಿ ಅಭಯಾರಣ್ಯ ಅಂಚಿನಲ್ಲಿರುವ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ಈ ವ್ಯಾಪ್ತಿಯಲ್ಲಿ ಕಾಡಾನೆಗಳು ದಿನನಿತ್ಯ ಗ್ರಾಮಕ್ಕೆ ಸೇರಿಕೊಂಡು ರೈತರ ಬೆಳೆಗಳನ್ನು ನಾಶಪಡಿಸುತ್ತಿವೆ.
ಶ್ರೀಮಂಗಲ ಅರಣ್ಯ ವಲಯ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ಶ್ರೀಮಂಗಲ ಅರಣ್ಯ ವಲಯ, ನಾಗರಹೊಳೆ ಮತ್ತು ಪೆÇನ್ನಂಪೇಟೆ ಅರಣ್ಯ ವಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ ಸುಮಾರು 50ಕ್ಕೂ ಅಧಿಕ ಸಿಬ್ಬಂದಿಗಳ ತಂಡ, ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವಿರೇಂದ್ರ ಮರಿಬಸಣ್ಣವರ್, ನಾಗರಹೊಳೆ ವಲಯ ಅರಣ್ಯಾಧಿಕಾರಿ ಅನಿಲ್ ಗೌಡ ಮತ್ತು ಪೆÇನ್ನಂಪೇಟೆ ವಲಯ ಅರಣ್ಯಾಧಿಕಾರಿ ತೀರ್ಥ, ಪಾಲ್ಗೊಂಡಿದ್ದರು.