ಕುಶಾಲನಗರ, ನ. 26: ಕುಶಾಲನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಕಾರ್ತಿಕ ಮಾಸದ ದೀಪಾರಾಧನೆ ಪೂಜಾ ಕಾರ್ಯಕ್ರಮ ಶ್ರದ್ದಾಭಕ್ತಿ ಯಿಂದ ನೆರವೇರಿತು. ಆರ್ಯವೈಶ್ಯ ಮಂಡಳಿಯ ನೇತೃತ್ವದಲ್ಲಿ ನಡೆದ ದೀಪೆÇೀತ್ಸವ ಪೂಜಾ ಕಾರ್ಯಕ್ರಮದ ಅಂಗವಾಗಿ ವಾಸವಿ ದೇವಿ ಮೂರ್ತಿಯನ್ನು ವಿಶೇಷವಾಗಿ ಬೆಳ್ಳಿ ನಾಣ್ಯಗಳಿಂದ ಅಲಂಕರಿಸಲಾಗಿತ್ತು.

ಮಂಡಳಿಯ ಉಪ ಸಮಿತಿಗಳ ಅಧ್ಯಕ್ಷರುಗಳು ಸೇರಿದಂತೆ ಮಂಡಳಿಯ ಪ್ರಮುಖರು ದೀಪಗಳನ್ನು ಬೆಳಗುವ ಮುಖಾಂತರ ದೀಪಾರಾಧನೆಗೆ ಚಾಲನೆ ನೀಡಿದರು. ದಿನದ ಮಹತ್ವದ ಕುರಿತು ಮಾತನಾಡಿದ ಆರ್ಯ ವೈಶ್ಯ ಮಹಿಳಾ ಮಂಡಳಿಯ ಮಾಜಿ ಅಧ್ಯಕ್ಷೆ ಆಶಾ ಅಶೋಕ್, ಕಾರ್ತಿಕ ಮಾಸ ವೈಚಾರಿಕವಾಗಿ, ವೈಜ್ಞಾನಿಕವಾಗಿ ಮತ್ತು ಪೌರಾಣಿಕವಾಗಿಯೂ ಮಹತ್ವ ಪೂರ್ಣದ್ದಾಗಿದೆ. ಇವೆಲ್ಲಕ್ಕೂ ಆಧ್ಯಾತ್ಮಿಕತೆಯ ಹೊಳಪು ನೀಡಿದ ನಮ್ಮ ಪೂರ್ವಜರು ಆಚರಣೆಗಳನ್ನು ಜಾರಿಗೆ ತಂದಿದ್ದಾರೆ. ಸಧ್ವಿಚಾರ, ಸದುದ್ದೇಶ ಹೊಂದಿರುವ ಹಿಂದೂ ಸನಾತನ ಅಚಾರಣೆಗಳನ್ನು ಅರಿತು ಶ್ರದ್ಧೆಯಿಂದ ಪಾಲಿಸಿದರೆ ಪ್ರತಿ ಯೊಬ್ಬರಿಗೂ ಶುಭವಾಗಲಿದೆ ಎಂದರು.

ನೆರೆದಿದ್ದ ಸಮುದಾಯ ಬಾಂಧವರು, ಭಕ್ತರು ನೂರಾರು ದೀಪಗಳನ್ನು ಬೆಳಗಿಸಿ ದೀಪಾರಾಧನೆ ಮೂಲಕ ಸಂಭ್ರಮಿಸಿದರು. ಇದೇ ಸಂದರ್ಭ ದೀಪಾರಾಧನೆ ವಿಶೇಷ ದೀಪಗಳ ಕುಂಚಗಳನ್ನು ತಯಾರಿಸಿದ ಗುಡ್ಡೆಹೊಸೂರಿನ ಮಣಿಕುಮಾರ್ ಎಂಬವರನ್ನು ಸನ್ಮಾನಿಸಿ ಗೌರವಿಸಲಾಯಿತು. ಆರ್ಯವೈಶ್ಯ ಮಂಡಳಿ ಅಧ್ಯಕ್ಷ ವಿ.ಪಿ. ನಾಗೇಶ್, ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾ ಸತ್ಯ, ವಾಸವಿ ಯುವಜನ ಸಂಘದ ಅಧ್ಯಕ್ಷ ನಾಗ ಪ್ರವೀಣ್, ಯುವತಿ ಮಂಡಳಿ ಅಧ್ಯಕ್ಷೆ ಲಕ್ಷ್ಮಿ ಹರೀಶ್, ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಅಮೃತ್‍ರಾಜ್, ಆರ್ಯ ವೈಶ್ಯ ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ನಿಕಟಪೂರ್ವ ಅಧ್ಯಕ್ಷರಾದ ಬಿ.ಎಲ್. ಸತ್ಯನಾರಾಯಣ, ವಿ.ಎನ್. ವಸಂತಕುಮಾರ್, ವಿ.ಎನ್. ಪ್ರಭಾಕರ್, ಅಶೋಕ್‍ಕುಮಾರ್, ಉದಯ ಕುಮಾರ್, ಪಿ.ಪಿ.ಸತ್ಯನಾರಾಯಣ, ರಾಜಗೋಪಾಲ್, ಪ್ರಮುಖರಾದ ಲಕ್ಷ್ಮಿ ಶ್ರೀನಿವಾಸ್, ಲತಾ ರಮೇಶ್ ಮತ್ತಿತರರು ಇದ್ದರು.