ಕೂಡಿಗೆ, ನ. 26: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈಗಾಗಲೇ ಕುಶಾಲನಗರ ತಾಲೂಕು ಕಸಾಪ ಘಟಕವನ್ನು ಪ್ರಾರಂಭಿಸಿದ್ದು, ಅದರಂತೆ ಕುಶಾಲನಗರ ತಾಲೂಕಿನ ಸಂಭವನೀಯ ಹೋಬಳಿ ಘಟಕವಾಗಿರುವ ಹೆಬ್ಬಾಲೆಯಲ್ಲಿ ವಿಶೇಷ ಘಟಕ ಸ್ಥಾಪಿಸುವ ಉದ್ದೇಶದಿಂದ ಪೊರ್ವಭಾವಿ ಸಭೆಯು ಸಮೀಪದ ತೊರೆನೂರು ಗ್ರಾಮದಲ್ಲಿ ನಡೆಯಿತು.
ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್. ಲೋಕೇಶ್‍ಸಾಗರ್ ಅವರ ಅಧ್ಯಕ್ಷತೆಯಲ್ಲಿ ತೊರೆನೂರು ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಸಭೆ ನಡೆಯಿತು.
ಹಿರಿಯ ಸಾಹಿತಿ ಭಾರಧ್ವ್ವಾಜ್ ಕೆ. ಆನಂದತೀರ್ಥ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಹಲವಾರು ಕನ್ನಡಾಭಿಮಾನಿಗಳು ಹಾಗೂ ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ಸೋಮವಾರಪೇಟೆ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಟಿ.ಕೆ.ಪಾಂಡುರಂಗ ಅವರನ್ನು ಸಂಭವನೀಯ ಹೋಬಳಿ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಹೆಬ್ಬಾಲೆ ವಿಶೇಷ ಘಟಕದ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ಕುಶಾಲನಗರ ತಾಲೂಕು ಸಮಿತಿಯ ನಿರ್ದೇಶಕ ಚಂದ್ರಪ್ಪ, ಜಿಲ್ಲಾ ಘಟಕದ ವಿಶೇಷ ಆಹ್ವಾನಿತ ಕೆ.ಎಸ್. ಕೃಷ್ಣೇಗೌಡ, ತೊರೆನೂರು ಗ್ರಾ.ಪಂ. ಸದಸ್ಯ ಮಹೇಶ್, ಕಸಾಪ ಸದಸ್ಯರಾದ ಸೋಮಾಚಾರಿ, ಪ್ರಕಾಶ್, ಎ.ಎಂ. ಅಣ್ಣಯ್ಯ, ರಮೇಶ್, ಹೆಚ್.ಎಸ್. ಲೋಕೇಶ್, ಟಿ.ಎಸ್. ರಾಜಶೇಖರ್, ಟಿ.ಜಿ.ಮಧು ಸೇರಿದಂತೆ ಮತ್ತಿತರರು ಇದ್ದರು.