ಸೋಮವಾರಪೇಟೆ, ನ. 26: ವಿಶೇಷ ಚೇತನರ ಬಗ್ಗೆ ಅನುಕಂಪದ ಮಾತನಾಡುವದಕ್ಕಿಂತ ಅವರಿಗೆ ಅವಕಾಶಗಳನ್ನು ನೀಡಿ, ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಎಲ್ಲರಿಂದಾಗಬೇಕಾಗಿದೆ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಹೇಳಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲೆಯ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ವಿಶೇಷಚೇತನರ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ಎಲ್ಲಾ ಕ್ಷೇತ್ರಗಳಲ್ಲೂ ವಿಶೇಷ ಚೇತನರು ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಸರಕಾರಿ ಉದ್ಯೋಗ ಸೇರಿದಂತೆ ಇನ್ನಿತರ ಸಂಸ್ಥೆಗಳಲ್ಲಿ ಉತ್ತಮ ಸ್ಥಾನವನ್ನು ಪಡೆದಿದ್ದಾರೆ.
ಪ್ರಾರಂಭಿಕ ಹಂತದಲ್ಲಿಯೇ ವಿಶೇಷಚೇತನರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವಂತಹ ಕೆಲಸವನ್ನು ಇಲಾಖೆಗಳು ಮಾಡಬೇಕು.
ಇದರೊಂದಿಗೆ ಸರ್ಕಾರದಿಂದ ಅವರಿಗೆ ಸಿಗುವ ಸೌಲಭ್ಯಗಳನ್ನು ಮನೆಬಾಗಿಲಿಗೆ ತಲುಪಿಸುವಂತಾಗ ಬೇಕೆಂದರು.
ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ತಂಗಮ್ಮ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್, ಸಹಾಯಕ ಯೋಜನಾಧಿಕಾರಿ ಅಣ್ಣಯ್ಯ, ಮೇಲ್ವಿಚಾರಕ ಹರೀಶ್, ವಿವೇಕಾನಂದ ಯೂತ್‍ಮೂವ್ ಮೆಂಟ್‍ನ ತಾಲೂಕು ಮೇಲ್ವಿಚಾರಕ ಸುರೇಶ್ ಉಪಸ್ಥಿತರಿದ್ದರು.