ವೀರಾಜಪೇಟೆ, ನ. 24: ಭ್ರಷ್ಟಾಚಾರ ನಿಗ್ರಹ ದಳದಿಂದ ಪುರಭವನದಲ್ಲಿ ಸಾರ್ವಜನಿಕ ಜನ ಸಂಪರ್ಕ ಸಭೆ ಬುಧವಾರ ವೃತ್ತ ನಿರೀಕ್ಷಕ ಮಹೇಶ್ ಅವರ ನೇತೃತ್ವದಲ್ಲಿ ನಡೆಯಿತು. ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸರ್ಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದು ಇದರಲ್ಲಿ ಭ್ರಷ್ಟಾಚಾರ ನಿಗ್ರಹ ದಳವು ಒಂದಾಗಿದೆ. ಎಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಅಂತವರ ವಿರುದ್ಧ ಇಲಾಖೆಗೆ ದೂರು ನೀಡಿ ಎಂದು ಹೇಳಿದರು.

ಈ ಸಂಪರ್ಕ ಸಭೆಯಲ್ಲಿ ಗಾಂಧಿನಗರದ ಪಿ.ಎ ಮಂಜುನಾಥ್ ಮಾತನಾಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಮಾಡಲು ಪಂಚಾಯಿತಿಯಿಂದ ನಿರಾಪೇಕ್ಷಣಾ ಪತ್ರ ಪಡೆದುಕೊಳ್ಳ ಬೇಕು.

ಸ್ಥಳೀಯ ಸದಸ್ಯೆಯೊಬ್ಬರು ನಿರಾಪೇಕ್ಷಣೆ ಕೊಡಿಸುವದಾಗಿ ಹೇಳಿ ಒಬ್ಬ ಬಡ ಅರ್ಜಿದಾರರಿಂದ ಸಾವಿರಾರು ರೂಪಾಯಿ ಹಣ ನೀಡು ವಂತೆ ಕೇಳಿದ್ದಾರೆ. ಅವರ ಮಾತಿನ ತುಣುಕು ದಾಖಲೆ ನಮ್ಮ ಬಳಿ ಇದೆ. ನಿಗ್ರಹ ದಳದವರು ಸಾರ್ವಜನಿಕ ಸಂಪರ್ಕ ಸಭೆ ನಡೆಸುವಾಗ ಯಾರಿಗೂ ತಿಳಿಸದೆ ಸಭೆ ನಡೆಸುವದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಪಟ್ಟಣ ಪಂಚಾಯಿತಿ ಸದಸ್ಯೆ ಆಶಾ ಸುಬ್ಬಯ್ಯ ಮಾತನಾಡಿ ನಾವು ದೂರು ನೀಡಿದರೆ ದೂರುದಾರರ ಹೆಸರನ್ನು ಬಹಿರಂಗ ಪಡಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿ ಕೆಲವೊಂದು ಸಂದÀರ್ಭಗಳಲ್ಲಿ ದೂರುದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ. ಸಾರ್ವಜನಿಕರು ಧ್ಯೆರ್ಯವಾಗಿ ಬಂದು ದೂರು ನೀಡಬಹುದು ಎಂದು ಹೇಳಿದರು.

ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಉಪಸ್ಥಿತರಿದ್ದರು. ಸುಮಾರು 40 ಮಂದಿ ಸಭೆಯಲ್ಲಿ ಹಾಜರಾಗಿದ್ದರೂ ಕೂಡ ಒಂದೆರಡು ಜನರನ್ನು ಹೊರತು ಪಡಿಸಿ ಉಳಿದವರ್ಯಾರೂ ಯಾವದೇ ದೂರು ನೀಡಲಿಲ್ಲ.

ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಎಸ್.ಎಚ್. ಮತೀನ್ ಮಾತನಾಡಿ ಭ್ರಷ್ಟಾಚಾರ ನಿಗ್ರಹ ದಳದಿಂದ ಮೊದಲೇ ಸಾರ್ವಜನಿಕರಿಗೆ ಮಾಹಿತಿ ನೀಡಿ ಸರ್ಕಾರಿ ಕಚೇರಿಗಳ ಆವರಣದಲ್ಲಿ ಸಭೆ ನಡೆಸಿದರೆ ನೂರಾರು ಜನ ಸೇರುತ್ತಾರೆ. ತಮ್ಮ ಕುಂದು ಕೊರತೆಗಳನ್ನು ಹೇಳಲು ಸಾಧ್ಯವಾಗಲಿದೆ ಎಂದು ನುಡಿದರು.