ಕಣಿವೆ, ನ. 24: ಹಾರಂಗಿ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ಹರಿಸುವ ಉದ್ದೇಶದಿಂದ ಈ ಬಾರಿ ನೀರು ಪೋಲಾಗದಂತೆ ಎಚ್ಚರವಹಿಸಿ ಸಂರಕ್ಷಿಸಬೇಕೆಂದು ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಹಾರಂಗಿ ಜಲಾಶಯ ಕೊಡಗಿನ ರೈತರ ಪಾಲಿಗೆ ಇದ್ದೂ ಇಲ್ಲದಂತಹ ಸ್ಥಿತಿಯಲ್ಲಿರುವ ಜಲಾಶಯ. ಏಕೆಂದರೆ, ಕೇವಲ ಕೂಡಿಗೆ, ಹೆಬ್ಬಾಲೆ, ತೊರೆನೂರು ಹಾಗು ಶಿರಂಗಾಲ ಈ ನಾಲ್ಕೇ ಗ್ರಾಮ ಪಂಚಾಯತಿ ಗಳ ಕೆಲವೇ ರೈತರು ಹಾರಂಗಿ ಜಲಾಶಯದ ನೀರಿನ ಉಪಯೋಗ ಪಡೆಯುತ್ತಿದ್ದಾರೆ. ಉಳಿದಂತೆ ನೆರೆಯ ಹಾಸನ ಜಿಲ್ಲೆಯ ಅರಕಲಗೂಡು ಹಾಗು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಮತ್ತು ಕೆ.ಆರ್.ನಗರ ತಾಲೂಕಿನ ಬಹುತೇಕ ರೈತರಿಗೆ ಈ ಜಲಾಶಯ ವರದಾನವಾಗಿದೆ.
ಆದರೆ ಕೊಡಗು ಜಿಲ್ಲೆಯ ಕುಶಾಲನಗರ ಹೋಬಳಿಯ ಉತ್ತರ ಭಾಗದ ಕೆಲವೇ ರೈತರು ಹಾರಂಗಿ ಜಲಾಶಯದ ನೀರನ್ನು ಬಳಸುತ್ತಿರುವ ಕಾರಣ ಈ ಬಾರಿ ಜಲಾಶಯದಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಯಾಗಿರುವದರಿಂದ ಈ ಬಾರಿಯ ಬೇಸಿಗೆ ಬೆಳೆಗೂ ನೀರು ಹರಿಸಬೇಕೆಂದು ಕೂಡಿಗೆ ರೈತ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತಕುಮಾರ್ ಜಿಲ್ಲಾಧಿಕಾರಿ ಮತ್ತು ಕಾವೇರಿ ನೀರಾವರಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇಲ್ಲಿನ ರೈತರು ಕಳೆದ ಹಲವು ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಈ ಹಿಂದೆ ಬೇಸಿಗೆ ಬೆಳೆಗೆ ಹಾರಂಗಿ ನೀರನ್ನು ಹರಿಸುವ ಮಾದರಿಯಲ್ಲಿಯೇ ಈ ಬಾರಿಯೂ ಜಲಾಶಯದಲ್ಲಿ ನೀರು ಶೇಖರಣೆ ಇರುವುದರಿಂದ ರೈತರ ಗದ್ದೆಗಳಿಗೆ ಹರಿಸಿ ಮತ್ತೊಂದು ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಬೇಕೆಂದು ಹೇಮಂತಕುಮಾರ್ ಒತ್ತಾಯಿಸಿದ್ದಾರೆ.