ಮಡಿಕೇರಿ, ನ. 24: ಕರ್ನಾಟಕ ಪೌರ ಸುಧಾರಣ ಯೋಜನೆಯಡಿ ಸರ್ವೆ ಮಾಡಿದ ಆಸ್ತಿಗಳ ಮಾಹಿತಿಗಳು ಇ-ತಂತ್ರಾಂಶದಲ್ಲಿ ಲಭ್ಯವಿದ್ದು, ಆಸ್ತಿಗಳ ಸರ್ವೆ ಸಮಯದಲ್ಲಿ ಎಫ್.ಎ.ಆರ್.-19 ರ ದಾಖಲೆಯಲ್ಲಿ ¯ಭ್ಯವಿದ್ದ ಆಸ್ತಿಗಳನ್ನು ಅಧಿಕೃತ ಆಸ್ತಿಗಳೆಂದು ಪರಿಗಣಿಸಲಾಗಿದ್ದು, ಈ ಆಸ್ತಿಗಳಿಗೆ ನಮೂನೆ-3ನ್ನು ನೀಡುವಾಗ ಯಾವದೇ ದಾಖಲಾತಿಗಳನ್ನು ಅಪ್‍ಲೋಡ್ ಮಾಡುವ ಅವಶ್ಯಕತೆ ಇರುವದಿಲ್ಲ ಎಂದು ಶಾಸಕ, ಕಂದಾಯ ಇಲಾಖೆಗಳ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರು ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಪತ್ರ ಬರೆದಿದ್ದಾರೆ.

ಆದರೆ ನಗರಸಭೆ ವ್ಯಾಪ್ತಿಯಲ್ಲಿ ಬಹಳಷ್ಟು ಆಸ್ತಿಗಳು ಭೂಪರಿವರ್ತನೆಗೊಂಡು, ಅನೇಕ ಸಕ್ಷಮ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆದಿರುವದಿಲ್ಲ. ಈಗಾಗಲೇ ಇಂತಹ ಸಕ್ಷಮ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯದೆ ಬಹಳಷ್ಟು ನಿವೇಶನಗಳಲ್ಲಿ ಹಲವಾರು ವರ್ಷಗಳಿಂದ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಾ ಇದ್ದಾರೆ. ಆದರೆ, ಹಲವು ಪ್ರದೇಶಗಳಲ್ಲಿ ವಿನ್ಯಾಸ ಅನುಮೋದನೆ ಪಡೆಯಲು ಬೇಕಾದಂತಹ 30 ಅಡಿ ಅಗಲದ ರಸ್ತೆ ಕೂಡ ಇರುವದಿಲ್ಲ.

ಇಂತಹ ಸಂದರ್ಭಗಳಲ್ಲಿ ನಮೂನೆ-3ನ್ನು ನೀಡಲು ಸಮಸ್ಯೆಗಳು ಎದುರಾಗುತ್ತಿದ್ದು, ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ. ಮತ್ತೊಮ್ಮೆ ಅನಧಿಕೃತ ವಾಸದ ಕಟ್ಟಡಗಳನ್ನು ಸಕ್ರಮಗೊಳಿಸಲು ಅವಕಾಶ ಮಾಡಿದ್ದಲ್ಲಿ ಜನಸಾಮಾನ್ಯರಿಗೆ ಉಂಟಾಗುವ ತೊಂದರೆಗಳನ್ನು ನಿವಾರಿಸಲು ಸಾಧ್ಯವಿದೆ. ಸಾರ್ವಜನಿಕರಿಗೆ ಅದರಲ್ಲಿಯೂ ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ ಇ-ಆಸ್ತಿ ತಂತ್ರಾಂಶದಲ್ಲಿ ಒಂದು ಬಾರಿ ಅನಧಿಕೃತ ವಾಸದ ಕಟ್ಟಡಗಳನ್ನು ಸಕ್ರಮಗೊಳಿಸಲು ವಿನಂತಿಸುತ್ತೇನೆ.

ಈ ಸಮಸ್ಯೆಗೆ ಪರಿಹಾರ ಸಿಕ್ಕು ಅಸಂಖ್ಯ ಜನರಿಗೆ ಅನುಕೂಲವಾಗುವದರ ಜೊತೆಗೆ ಸರಕಾರಕ್ಕೆ ಹಾಗೂ ಪೌರಾಡಳಿತ ಸಂಸ್ಥೆಗಳಿಗೆ ಹೆಚ್ಚಿನ ಆದಾಯ ಬರುವದರಲ್ಲಿ ಯಾವದೇ ಸಂಶಯವಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.