ಕುಶಾಲನಗರ, ನ 24: ಕೊಣನೂರು-ಮಾಕುಟ್ಟ ರಸ್ತೆಯ ಕುಶಾಲನಗರ ಪಟ್ಟಣ ವ್ಯಾಪ್ತಿಯ ಮಾರುಕಟ್ಟೆ ರಸ್ತೆಯ ಎರಡೂ ಬದಿಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಪ.ಪಂ. ಮೂಲಕ ನಡೆಯಿತು. ಪಟ್ಟಣದ ಮೈಸೂರು ರಸ್ತೆಯಿಂದ ಮಾರುಕಟ್ಟೆ ಮೂಲಕ ಆಂಜನೇಯ ದೇವಾಲಯ ತನಕ ಎರಡೂ ಕಡೆಗಳಲ್ಲಿ ರಾಜ್ಯ ಹೆದ್ದಾರಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಈ ಮೂಲಕ ಇತ್ತೀಚಿನ ದಿನಗಳಲ್ಲಿ ಅಪಘಾತಗಳು ನಡೆದಿದ್ದು ಜೀವಹಾನಿ ಆಗಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಕುಶಾಲನಗರ ಪಪಂ ಮುಖ್ಯಾಧಿಕಾರಿ ಸುಜಯ್‍ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.ಕಳೆದ ಒಂದು ವಾರದಿಂದ ರಸ್ತೆ ಗಡಿ ಗುರುತು ಮಾಡುವ ಸಂಬಂಧ ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯ್ತಿ ಕಾರ್ಯಯೋಜನೆ ರೂಪಿಸಿ, ಪತ್ರಿಕಾ ಪ್ರಕಟಣೆ ನೀಡುವ ಮೂಲಕ ತೆರವುಗೊಳಿಸಲು ಸೂಚನೆ ನೀಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಯಿತು.
ರಸ್ತೆ ಮಧ್ಯಭಾಗದಿಂದ ಎರಡೂ ಕಡೆಗಳಲ್ಲಿ 10 ಮೀ ಅಗಲದಲ್ಲಿ ತೆರವು ಕಾರ್ಯಾಚರಣೆ ನಡೆದಿದೆ ಎಂದು ಮುಖ್ಯಾಧಿಕಾರಿ ಸುಜಯ್ ಕುಮಾರ್ ತಿಳಿಸಿದ್ದಾರೆ. ಅಕ್ರಮವಾಗಿ ಕಟ್ಟಡ ನಿರ್ಮಿಸಿ ತೆರವುಗೊಳಿಸದಿದ್ದ ಕಟ್ಟಡ ಮಾಲೀಕರಿಗೆ ತೆರವು ಕಾರ್ಯದ
(ಮೊದಲ ಪುಟದಿಂದ) ವೆಚ್ಚ ಭರಿಸಲು ಕ್ರಮಕೈಗೊಳ್ಳಲಾಗುವದು ಎಂದು ಅವರು ಮಾಹಿತಿ ನೀಡಿದ್ದಾರೆ.
ನಿಯಮಾನುಸಾರ ಕಟ್ಟಡ ನಿರ್ಮಿಸಿ ವ್ಯಾಪಾರ ವಹಿವಾಟುಗಳನ್ನು ಮಾಡುವ ಮೂಲಕ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವಂತೆ, ವಾರ್ಡ್ ಸದಸ್ಯ ಶೇಖ್ ಖಲೀಮುಲ್ಲಾ ಈ ಸಂದರ್ಭ ಮನವಿ ಮಾಡಿದ್ದಾರೆ.
ತೆರವು ಕಾರ್ಯ ಸಂದರ್ಭ ರಸ್ತೆ ಬದಿಯ ವ್ಯಕ್ತಿಯೊಬ್ಬರು ಅಧಿಕಾರಿಗಳೊಂದಿಗೆ ಅಸಮಾಧಾನ ಹೊರಹಾಕಿದ ಹಿನ್ನೆಲೆಯಲ್ಲಿ, ಪೊಲೀಸ್ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ನಡೆಸಲಾಯಿತು.
ಈ ಸಂದರ್ಭ ಪಪಂ ಆರೋಗ್ಯಾಧಿಕಾರಿ ಉದಯಕುಮಾರ್, ಅಭಿಯಂತರೆ ಶ್ರೀದೇವಿ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.