ಸೋಮವಾರಪೇಟೆ, ನ. 24: ಕಳೆದ ಸಾಲಿನಲ್ಲಿ ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಾರಿಗೆ ತಂದಿದ್ದು, ಅದರಂತೆ ಬಹುತೇಕ ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿದೆ. ಆದರೆ ಸೋಮವಾರ ಪೇಟೆ ಪಟ್ಟಣದಲ್ಲಿ ಮಾತ್ರ ಈ ಕ್ಯಾಂಟೀನ್ನ ಕಟ್ಟಡ ಕಾಮಗಾರಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ.ಇಲ್ಲಿನ ಮಾರ್ಕೆಟ್ ಏರಿಯಾದ ಸಿ.ಕೆ. ಸುಬ್ಬಯ್ಯ ರಸ್ತೆಗೆ ಒತ್ತಿಕೊಂಡಂತಿ ರುವ ಪ.ಪಂ. ವಾಣಿಜ್ಯ ಸಂಕೀರ್ಣದ ಮುಂಭಾಗ ಸುಮಾರು 8.5 ಸೆಂಟ್ಸ್ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಯೋಜನೆ ರೂಪಿಸ ಲಾಗಿದ್ದು, ಅದರಂತೆ ಕ್ಯಾಂಟೀನ್ನ ತಳಪಾಯದ ಕಾಮಗಾರಿ ಮುಕ್ತಾಯಗೊಂಡಿದೆ.ತಳಪಾಯ ಕಾಮಗಾರಿ ಮುಕ್ತಾಯಗೊಂಡು ಒಂದು ವರ್ಷ ಕಳೆದರೂ ಸಹ ಇಂದಿಗೂ ಕಟ್ಟಡದ ಕಾಮಗಾರಿ ಪ್ರಾರಂಭವಾಗಿಲ್ಲ. ಇಂದಿರಾ ಕ್ಯಾಂಟೀನ್ಗೆ ಪಟ್ಟಣ ಪಂಚಾಯಿತಿಯಿಂದ 8.5 ಸೆಂಟ್ಸ್ ಜಾಗವನ್ನು ನೀಡಲಾಗಿದ್ದು, ಕಾಮಗಾರಿ ಸದ್ಯಕ್ಕೆ ನಿಂತ ನೀರಾಗಿದೆ.ರಾಜ್ಯಾದ್ಯಂತ ಓರ್ವರೇ ಏಜೆನ್ಸಿ ಪಡೆದಿದ್ದು, ಒಂದು ಭಾಗದಿಂದ ಕ್ಯಾಂಟೀನ್ ಕಾಮಗಾರಿ ಮಾಡಿ ಕೊಂಡು ಬರಲಾಗುತ್ತಿದೆ. ಒಟ್ಟು 9 ಲಕ್ಷ ವೆಚ್ಚದಲ್ಲಿ ಕ್ಯಾಂಟೀನ್ ಕಟ್ಟಡ ಕಾಮಗಾರಿ ನಡೆಯಲಿದೆ. ಈಗಾಗಲೇ ಪ್ಲಾಟ್ಫಾರಂ ಕಾಮಗಾರಿ ಪೂರ್ಣ ಗೊಂಡಿದ್ದು, ಇನ್ನು ಮೋಲ್ಡ್ಗಳನ್ನು ತಂದು
(ಮೊದಲ ಪುಟದಿಂದ) ಅಳವಡಿಸಬೇಕಿದೆ ಎಂದು ಅಭಿಯಂತರರು ತಿಳಿಸಿದ್ದಾರೆ.
ಕ್ಯಾಂಟೀನ್ ಕಾಮಗಾರಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಡೈರೆಕ್ಟರ್ ಕಚೇರಿಗೆ ಮಾಹಿತಿ ನೀಡಲಾಗಿದೆ. ಪ್ಲಾಟ್ಫಾರಂ ಸಿದ್ದಗೊಂಡಿದ್ದು, ಮೋಲ್ಡ್ ಗೋಡೆಗಳನ್ನು ಅಳವಡಿಸಬೇಕಿದೆ. ಇದಕ್ಕೆ ಬೃಹತ್ ಯಂತ್ರೋಪಕರಣ, ಕ್ರೇನ್ಗಳ ಅವಶ್ಯಕತೆಯಿದ್ದು, ಮಂಗಳೂರಿನ ಕಾಮಗಾರಿ ಮುಗಿದ ನಂತರ ಸೋಮವಾರಪೇಟೆಗೆ ತರುವ ಬಗ್ಗೆ ಏಜೆನ್ಸಿಯವರು ಮಾಹಿತಿ ನೀಡಿದ್ದಾರೆ ಎಂದು ಪ.ಪಂ. ಮುಖ್ಯಾಧಿಕಾರಿಗಳು ಪತ್ರಿಕೆಗೆ ಮಾಹಿತಿ ನೀಡಿ 8 ತಿಂಗಳು ಕಳೆದಿದೆ!
ಆದರೆ ಇದುವರೆಗೂ ಇಂದಿರಾ ಕ್ಯಾಂಟೀನ್ ಕಾಮಗಾರಿ ಪ್ರಾರಂಭವಾದ ಬಗ್ಗೆ ಸಣ್ಣ ಕುರುಹೂ ಸಹ ಸಿಗುತ್ತಿಲ್ಲ. ಬಹಳಷ್ಟು ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಯಶಸ್ವಿಯಾಗಿ ನಡೆಯುತ್ತಿದ್ದು, ಹಸಿದವರಿಗೆ ಕಡಿಮೆ ಖರ್ಚಿನಲ್ಲಿ ಹಸಿವು ತಣಿಸಲಾಗುತ್ತಿದೆ. ಸೋಮವಾರಪೇಟೆಯಲ್ಲೂ ಇಂದಿರಾ ಕ್ಯಾಂಟೀನ್ಗೆ ಜಾಗ ಗುರುತಿಸಿ, ತಳಪಾಯ ಕಾಮಗಾರಿ ನಿರ್ವಹಿಸಿರುವದನ್ನು ಬಿಟ್ಟರೆ ಬೇರಿನ್ಯಾವ ಪ್ರಗತಿಯೂ ಕಾಣುತ್ತಿಲ್ಲ.
ಈ ಬಗ್ಗೆ ಸಂಬಂಧಿಸಿದ ಗುತ್ತಿಗೆದಾರರಿಂದ ಮಾಹಿತಿ ಪಡೆಯಲು ಮುಂದಾದರೂ ಅವರ ಮೊಬೈಲ್ ‘ಸ್ವಿಚ್ ಆಫ್’ ಆಗಿದೆ. ಕಳೆದ ಕೆಲ ದಿನಗಳ ಹಿಂದೆ ಗುತ್ತಿಗೆದಾರರೊಂದಿಗೆ ಮಾತನಾಡಿದ್ದು, ಆದಷ್ಟು ಶೀಘ್ರ ಕಾಮಗಾರಿ ಪ್ರಾರಂಭಿಸುವದಾಗಿ ತಿಳಿಸಿದ್ದಾರೆ ಎಂದು ಪ.ಪಂ. ಸದಸ್ಯ ಬಿ.ಆರ್. ಮಹೇಶ್ ‘ಶಕ್ತಿ’ಗೆ ಮಾಹಿತಿಯಿತ್ತಿದ್ದಾರೆ.
ಸರ್ಕಾರದ ಬಹು ನಿರೀಕ್ಷಿತ ಯೋಜನೆಯಾದ ಇಂದಿರಾ ಕ್ಯಾಂಟೀನ್ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಿ, ಸಾರ್ವಜನಿಕರ ಅನುಕೂಲಕ್ಕೆ ಒದಗಿಸಬೇಕು. ಈಗಾಗಲೇ ಕಾಮಗಾರಿ ವಿಳಂಬವಾಗಿದ್ದು, ಇನ್ನಾದರೂ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮುಂದಾಗಬೇಕು ಎಂದು ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ಒತ್ತಾಯಿಸಿದ್ದಾರೆ.
ಸದ್ಯಕ್ಕೆ ಸಿ.ಕೆ. ಸುಬ್ಬಯ್ಯ ರಸ್ತೆಯಿಂದ ಕ್ಯಾಂಟೀನ್ಗೆ ಗುರುತಿಸಿರುವ ನಿವೇಶನಕ್ಕೆ ತೆರಳಲು ಮೆಟ್ಟಿಲುಗಳ ನಿರ್ಮಾಣ, ತಳಪಾಯ ಕಾಮಗಾರಿ ಮಾತ್ರ ನಡೆದಿದ್ದು, ಮೋಲ್ಡ್ ಗೋಡೆಗಳ ನಿರ್ಮಾಣ, ಟೇಬಲ್ ಅಳವಡಿಕೆ ಸೇರಿದಂತೆ ಇನ್ನಿತರ ಕಾಮಗಾರಿಗಳು ಬಾಕಿ ಉಳಿದಿವೆ. ತಕ್ಷಣ ಕಾಮಗಾರಿಯನ್ನು ಪೂರ್ಣಗೊಳಿಸಲು ಪ.ಪಂ. ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
- ವಿಜಯ್ ಹಾನಗಲ್