ಸಿದ್ದಾಪುರ, ನ. 24: ಕಳೆದ ಆಗಸ್ಟ್ ತಿಂಗಳ ಮಹಾ ಮಳೆಯಿಂದಾಗಿ ಸಂತ್ರಸ್ತರಾದ ಕುಟುಂಬಗಳಿಗೆ ಸಮಸ್ತ ಕೇರಳ ಜಂಇಯತ್ತುಲ್ ಉಲಮಾ ಸಂಘಟನೆಯ ವತಿಯಿಂದ ಪರಿಹಾರ ಧನವನ್ನು ವಿತರಿಸಲಾಯಿತು.
ಸಿದ್ದಾಪುರದ ಮುನವ್ವಿರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಸಮಸ್ತ ಕೇರಳ ಮತ್ತು ವಿದ್ಯಾಭ್ಯಾಸ ಬೋರ್ಡ್ ಪ್ರಧಾನ ಕಾರ್ಯದರ್ಶಿ ಶೈಖುನಾ ಎಂ.ಟಿ ಉಸ್ತಾದ್ ಉದ್ಘಾಟಿಸಿದರು.
ಪ್ರವಾಹದಲ್ಲಿ ಮನೆಗಳು ಸಂಪೂರ್ಣವಾಗಿ ಹಾಗೂ ಭಾಗಶಃ ಹಾನಿಗೊಳಗಾದ ಕರಡಿಗೋಡು, ಗುಹ್ಯ ಮತ್ತು ನೆಲ್ಯಹುದಿಕೇರಿ ಭಾಗದ 113 ಕುಟುಂಬಗಳಿಗೆ ಪರಿಹಾರ ಧನವನ್ನು ವಿತರಿಸಿದರು.
ಸಂಘಟನೆಯ ಪ್ರಮುಖರಾದ ತಮ್ಲಿಕ್ ದಾರಿಮಿ ಮಾತನಾಡಿ, ಪ್ರವಾಹದಲ್ಲಿ ನಿರಾಶ್ರಿತರಾದ ಕೇರಳ ಹಾಗೂ ಕರ್ನಾಟಕ ರಾಜ್ಯದ ಸಂತ್ರಸ್ತರಿಗೆ ಸಮಸ್ತ ಕೇರಳ ಜಂಇಯತ್ತುಲ್ ಉಲಮಾ ಸಂಘಟನೆಯು ದೇಣಿಗೆ ರೂಪದಲ್ಲಿ ಸಂಗ್ರಹಿಸಿದ ಮೊತ್ತವನ್ನು ಎರಡೂ ರಾಜ್ಯದಲ್ಲಿ ಫಲಾನುಭವಿಗಳಿಗೆ ವಿತರಿಸಲಾಗಿದ್ದು, ಕೊಡಗು ಜಿಲ್ಲೆಯ ವಿವಿಧ ಭಾಗದ ಸಂತ್ರಸ್ತರಿಗೂ ಪರಿಹಾರ ಧನವನ್ನು ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಸಮಸ್ತ ಕೇಂದ್ರ ಮುಶಾವರ ಸದಸ್ಯ ಎಂ.ಅಬ್ದುಲ್ಲಾ ಫೈಝಿ, ಸಿದ್ದಾಪುರ ಮುಸ್ಲಿಂ ಜಮಾಹತ್ ಅಧ್ಯಕ್ಷ ಕೆ.ಉಸ್ಮಾನ್, ಪ್ರಮುಖರಾದ ಎಂ. ಅಬ್ದುರ್ರಹ್ಮಾನ್ ಮುಸ್ಲಿಯಾರ್, ಸಿ.ಪಿ.ಎಂ. ಬಶೀರ್ ಹಾಜಿ, ನೌಫಲ್ ಹುದವಿ, ಪಿ.ಬಿ ಇಸ್ಮಾಯಿಲ್ ಮುಸ್ಲಿಯಾರ್, ಇಬ್ರಾಹಿಂ ದಾರಿಮಿ, ಅಶ್ರಫ್ ಹಾಜಿ ಮೈಸೂರು, ಪಿ.ಸಿ ಉಮರ್ ಮೌಲವಿ, ಆರಿಫ್ ಫೈಝಿ ಸೇರಿದಂತೆ ಮತ್ತಿತರರು ಇದ್ದರು.
 
						