ಮಡಿಕೇರಿ, ನ. 24: ಗರ್ಭಿಣಿಯ ಆರೋಗ್ಯ ಚೆನ್ನಾಗಿದ್ದಲ್ಲಿ ಹುಟ್ಟುವ ಮಗುವೂ ಕೂಡ ಆರೋಗ್ಯವಾಗಿ ರುತ್ತದೆ. ಮಗು ಹುಟ್ಟುವ ಮೊದಲು ತಾಯಿಯನ್ನು ಆರೋಗ್ಯಯುತವಾಗಿ ನೋಡಿಕೊಳ್ಳಬೇಕು ಎಂದು ಮಕ್ಕಳ ತಜ್ಞರಾದ ಡಾ. ಕೃಷ್ಣಾನಂದ ತಿಳಿಸಿದ್ದಾರೆ.
ನಗರದ ಜಿಲ್ಲಾ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ‘ನವಜಾತ ಶಿಶು-ವಾರ ಆಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾಯಿಯ ಹೊಟ್ಟೆಯಲ್ಲಿ ಮಗು ಒಂಬತ್ತು ತಿಂಗಳು ಬೆಳೆಯಬೇಕು. ಜನನ ಸಂದರ್ಭದಲ್ಲಿ ಕನಿಷ್ಟ ಎರಡೂವರೆ ಕೆ.ಜಿ. ತೂಕವಿರಬೇಕು. ಹೆರಿಗೆಯನ್ನು ಕಡ್ಡಾಯವಾಗಿ ಆಸ್ಪತ್ರೆಯಲ್ಲೇ ಮಾಡಿಸಬೇಕು. ಇದರಿಂದ ತಾಯಿ ಮತ್ತು ಮಗುವಿನ ಮರಣ ತಡೆಯಬಹುದು. ದೇಶದಲ್ಲಿ ಜನಿಸುವ ಒಂದು ಸಾವಿರ ಮಕ್ಕಳಲ್ಲಿ 30 ರಿಂದ 40 ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ರಾಜ್ಯದಲ್ಲಿ 28 ಮಕ್ಕಳು ಹಾಗೆಯೇ ಜಿಲ್ಲೆಯಲ್ಲಿ 10 ಮಕ್ಕಳು ಮೃತಪಡುತ್ತಿದ್ದಾರೆ. ಮಕ್ಕಳ ಮರಣ ತಡೆಯಲು ತಾಯಿ ಮತ್ತು ಮಗುವಿನ ಆರೋಗ್ಯ ಕಡೆ ಹೆಚ್ಚಿನ ನಿಗಾವಹಿಸಬೇಕು ಎಂದು ಅವರು ಸಲಹೆ ನೀಡಿದರು. ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ಡಾ. ಹರ್ಷ ಮಾತನಾಡಿ, ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಬೇಕು. ಚಿಕಿತ್ಸೆ ಪಡೆಯಬೇಕು. ಆಸ್ಪತ್ರೆಗೆ ಕಾಲ ಕಾಲಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿ ಕೊಳ್ಳಬೇಕು. ಏಳು ತಿಂಗಳ ನಂತರ 15 ದಿನಗಳಿಗೊಮ್ಮೆ ಹಾಗೂ ಒಂಬತ್ತನೇ ತಿಂಗಳಲ್ಲಿ ವಾರಕ್ಕೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಔಷಧೋಪಚಾರ ಪಡೆಯಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್‍ಸಿಹೆಚ್ ಅಧಿಕಾರಿ ಡಾ. ಗೋಪಿನಾಥ್ ಮಾತನಾಡಿ, ಗರ್ಭಿಣಿಯರು ಆರೋಗ್ಯಯುತ ವಾಗಿರಬೇಕು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡಿರಬೇಕು. ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿರಬೇಕು. ಇದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.
ಡಾ. ವೀರೇಂದ್ರಕುಮಾರ್ ಅವರು ‘ಕಾಂಗಾರೂ ಮದರ್ ಕೇರ್’ ಬಗ್ಗೆ ಮಾಹಿತಿ ನೀಡಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರು ಹಾಗೂ ಮಕ್ಕಳ ವಿಭಾಗದ ಮುಖ್ಯಸ್ಥ ಪುರುಷೋತ್ತಮ ಮಾತನಾಡಿ, ಕಾಂಗಾರೂ ಮದರ್ ಕೇರ್ ಸೌಲಭ್ಯ ಪಡೆಯಲು ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಪ್ರತ್ಯೇಕ ಕೊಠಡಿ ತೆರೆಯಲಾಗಿದ್ದು, ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದರು. ಡಾ. ಶ್ರೀನಿವಾಸ ಗೌಡ ಅವರು ತಾಯಿ ಮತ್ತು ಮಗುವಿನ ಆರೋಗ್ಯ ಸಂಬಂಧ ಹಲವು ಮಾಹಿತಿ ನೀಡಿದರು. ಡಾ. ಸಲ್ಮಾ, ಡಾ. ದಿವ್ಯ, ಡಾ. ಅಕ್ಷತಾ, ಡಾ. ಮಾಲತೇಶ್ ಹಾವನೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್ ಇತರರು ಇದ್ದರು.