ವೀರಾಜಪೇಟೆ, ನ.22: ಮಾಜಿ ಸೈನಿಕರ ಸಹಕಾರ ಸಂಘದ ಕಟ್ಟಡದಲ್ಲಿರುವ ಆರ್ಮಿ ಕ್ಯಾಂಟೀನ್‍ನಲ್ಲಿ ಸಂಘದ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮದ್ಯ ವಿತರಣೆಗೆ ಅವಕಾಶ ದೊರೆತಿರುವದು ಮಾಜಿ ಸೈನಿಕರಿಗೆ ಒಂದು ಉತ್ತಮ ಸೌಲಭ್ಯ ಎಂದು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ವೀರಾಜಪೇಟೆ ಆರ್ಮಿ ಕ್ಯಾಂಟೀನ್‍ನಲ್ಲಿ ಮದ್ಯ ವಿತರಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾಜಿ ಸೈನಿಕರಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಎರಡು ಆರ್ಮಿ ಕ್ಯಾಂಟೀನ್‍ಗಳಿದ್ದು ಅದರಲ್ಲಿ ಮಡಿಕೇರಿಯಲ್ಲಿರುವ ಕ್ಯಾಂಟೀನ್‍ನಲ್ಲಿ ಮಾತ್ರ ಮದ್ಯ ಲಭ್ಯವಾಗುತ್ತಿತ್ತು. ಈಗ ವೀರಾಜಪೇಟೆ ಕ್ಯಾಂಟೀನ್‍ನಲ್ಲಿ ಮದ್ಯ ವಿತರಣೆಯನ್ನು ವಿಸ್ತರಿಸಿರುವದರಿಂದ ದಕ್ಷಿಣ ಕೊಡಗಿನಾದ್ಯಂತವಿರುವ ಮಾಜಿ ಸ್ಯೆನಿಕರ ಕುಟುಂಬಗಳಿಗೆ ಅನುಕೂಲವಾಗುತ್ತದೆ. ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪಟ್ರಪಂಡ ಗಣೇಶ್, ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚೇಂದ್ರಿಮಾಡ ನಂಜಪ್ಪ, ಉಪಾಧ್ಯಕ್ಷ ಚಪ್ಪಂಡ ಹರೀಶ್, ನಿರ್ದೇಶಕರಾದ ಪುಗ್ಗೆರ ನಂದಾ, ಪಟ್ರಪಂಡ ಕರುಂಬಯ್ಯ, ಮಂಡ್ಯೋಳಂಡ ಸುರೇಶ್, ಚಂದ್ರಶೇಖರ್, ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ, ಕೊಡವ ಸೌಹಾರ್ದ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ಮತ್ತಿತರರು ಹಾಜರಿದ್ದರು.