ಗೋಣಿಕೊಪ್ಪ, ನ. 23: ಶನಿವಾರ ಮುಂಜಾನೆ ವಾಣಿಜ್ಯ ನಗರದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ರಸ್ತೆ ಉದ್ದಗಲಕ್ಕೂ ಜನಸಾಗರ ಸೇರಿತ್ತು. ಹಿಂದೂ ಸಂಘಟನೆಯ ಯುವಕರು ಮೆರವಣಿಗೆಯಲ್ಲಿ ಸಾಗಿ ಬರುವ ಮುಸ್ಲಿಂ ಬಾಂಧವರಿಗೆ ಬಿಸಿ ಬಿಸಿ ಪಾಯಸ, ಕುಡಿಯುವ ನೀರು ಹಿಡಿದು ಎದುರು ನೋಡುತ್ತಿದ್ದರು. ಮೆರವಣಿಗೆಯು ಆರ್‍ಎಂಸಿ ಯಾರ್ಡ್ ನಿಂದ ಹೊರಟು ಮುಖ್ಯ ರಸ್ತೆಯಲ್ಲಿ ಸಾಗಿ ಬಂದವು. ಸಾವಿರಾರು ಸಂಖ್ಯೆ ಯಲ್ಲಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಪ್ರಯುಕ್ತ ಸ್ನೇಹ ಸಂದೇಶ ರ್ಯಾಲಿ ಆಯೋಜಿಸಿ ಕೋಮು ಸೌಹಾರ್ದತೆಗೆ ಸಾಕ್ಷಿಯಾದರು.

ಗೋಣಿಕೊಪ್ಪ ಶಾಫಿ ಮುಸ್ಲಿಂ ಜಮಾಅತ್ ವತಿಯಿಂದ ಮಿಲಾದ್ ಫೆಸ್ಟ್ 2019 ಅರ್ಥಪೂರ್ಣವಾಗಿ ಜರುಗಿತು. ಕಾರುಣ್ಯದ ಪ್ರತೀಕ, ಮಾನವೀಯ ಮೌಲ್ಯಗಳ ಪ್ರತಿಪಾದಕ ಮುಹಮ್ಮದ್ ಮುಸ್ತಫ(ಸ) ಅವರ ಸ್ನೇಹ ಸಂದೇಶ ರ್ಯಾಲಿಯು ಗಮನ ಸೆಳೆಯಿತು. ಮೆರವಣಿಗೆಯ ಉದ್ದಕ್ಕೂ ಚೋಕಂಡಳ್ಳಿ, ಬಾಳೆಲೆ, ಬೆಮ್ಮತ್ತಿ, ಪೊನ್ನಂಪೇಟೆ ಹಾಗೂ ಗೋಣಿಕೊಪ್ಪ, ಮದರಸ ವಿದ್ಯಾರ್ಥಿಗಳ ದಫ್ ಕಾರ್ಯಕ್ರಮ ಸೊಗಸಾಗಿ ಮೂಡಿ ಬಂತು.

ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿ ಗಳು ಹಲವು ತಂಡಗಳಲ್ಲಿ ನಡೆಸಿಕೊಟ್ಟ ಕಾರ್ಯಕ್ರಮವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಬಸ್ ನಿಲ್ದಾಣದ ಸಮೀಪ ಮುಂಜಾನೆ ಯಿಂದಲೇ ಹಿಂದೂ ಸಂಘಟನೆಯ ಯುವಕರಾದ ಸುರೇಶ್ ರೈ, ಶರಣು, ಭರತ್, ನಂದಾ, ಮಂಜು, ಶ್ರೀನಿ, ಶೇಖ್, ರಮೇಶ್, ರಾಜ, ರವೀಂದ್ರ, ಗ್ರೀಮೇಶ್, ಸಿಂಗಿ ಸತೀಶ್, ರಾಜೇಶ್ ಹಾಗೂ ಇತರ ಯುವಕರು ಕ್ರಿಶ್ಚಿಯನ್ ಸೊಸೈಟಿಯ ಪ್ರಮುಖರಾದ ಎ.ಜೆ. ಬಾಬು, ಆಂಥೋಣಿ, ಥಾಮಸ್, ಅನಿ, ಜೋನಿ, ವರ್ಗಿಸ್, ಜೋಶ್, ಮುಂತಾದವರು ಸಿಹಿ ಪಾಯಸ ವಿತರಿಸಿ ಶುಭ ಹಾರೈಸಿದರು. ಮುಸ್ಲಿಂ ಬಾಂಧವರು ಮಹಿಳೆಯರಾದಿ ಯಾಗಿ ಹಿಂದೂ, ಕ್ರಿಶ್ಚಿಯನ್ ಬಾಂಧವರು ನೀಡಿದ ಸಿಹಿ ಪಾಯಸವನ್ನು ಸ್ವೀಕರಿಸಿ ಧನ್ಯರಾದರು.

ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ರನ್ನು ಉದ್ದೇಶಿಸಿ ಮಾತನಾಡಿದ ಧರ್ಮಗುರು ತಮ್ಲಿಕ್ ದಾರಿಮಿ, ಜಾತಿÉ, ಬೇಧಗಳಿಗೆ ಅವಕಾಶ ನೀಡದೆ ಕೋಮು ಸೌಹಾರ್ದತೆ ಮೆರೆಯುವ ಮೂಲಕ ಸಂದೇಶ ಸಾರಿದ್ದೇವೆ. ನಾವೆಲ್ಲರೂ ಅಣ್ಣ - ತಮ್ಮಂದಿರಂತಿರ ಬೇಕು. ಸೌಹಾರ್ದತೆಯ, ಸಮಾನತೆಯ ಸಹಿಷ್ಣುತೆಯ ಸತ್ಯ ಸಂದೇಶಗಳನ್ನು ಸಾರೋಣ ಎಂದು ಹೇಳಿದರು.

ಗೋಣಿಕೊಪ್ಪ ಶಾಫಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಸಿ.ಪಿ.ಎಂ. ಬಶೀರ್ ಹಾಜಿ, ಕಾರ್ಯದರ್ಶಿ ಹಕೀಂ, ಸಂಚಾಲಕ ಪಿ.ಎ.ರಶೀದ್, ಪ್ರಮುಖರಾದ ಅಶ್ರಫ್, ಸಲಾಂ ಕೆ.ಪಿ. ಆಬುಟ್ಟಿ, ರಹೀಂ, ಕೆ.ಎಂ.ಅಶ್ರಫ್, ಸಮೀರ್, ರಜಾಕ್, ಮಾನು, ಹಮೀರ್, ಕುಂಞ ಮೊಹಮ್ಮದ್, ನೌಶದ್, ರಶೀದ್ ಮುಂತಾದವರು ಹಾಜರಿದ್ದರು.

ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಸುರೇಶ್ ಬೋಪಣ್ಣ ಹಾಗೂ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ನಿರ್ವಹಿಸಿದರು. ಮೆರವಣಿಗೆ ಸಂದರ್ಭ ವಾಹನ ಸಂಚಾರಕ್ಕೆ ತೊಂದರೆಯಾದ ಸಂದರ್ಭದಲ್ಲಿ ಬದಲಿ ರಸ್ತೆಯ ಮೂಲಕ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಲಾಯಿತು.

- ಹೆಚ್.ಕೆ.ಜಗದೀಶ್