ಶ್ರೀಮಂಗಲ, ನ. 23: ಪೊನ್ನಂಪೇಟೆಯ ಕೊಡವ ಸಮಾಜದ ಆಶ್ರಯದಲ್ಲಿ ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಸಂಸ್ಥೆಗೆ 25 ವರ್ಷ ತುಂಬಿದ ಪ್ರಯುಕ್ತ ಹಮ್ಮಿಕೊಂಡಿದ್ದ ರಜತಮಹೋತ್ಸವದ ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಿತು.ಶುಕ್ರವಾರ ಸಂಜೆಯಿಂದ ರಾತ್ರಿಯವರೆಗೆ ವಿದ್ಯಾರ್ಥಿಗಳು ಸಂಭ್ರಮದಿಂದ ವೇದಿಕೆಯಲ್ಲಿ ತಮ್ಮ ವಿವಿಧ ಪ್ರತಿಭೆಯನ್ನು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಜನರ ಮುಂದೆ ಪ್ರದರ್ಶಿಸಿ ಸಂತಸಪಟ್ಟರು.

ವಿದ್ಯಾಸಂಸ್ಥೆಯ ಪ್ರತಿ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಸೈನಿಕರ ದೇಶ ಪ್ರೇಮ, ಮೊಬೈಲ್ ಬಳಕೆಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಕಿರುನಾಟಕ ಜನಮನ ಸೆಳೆಯಿತು. ಸುಮಾರು 50 ವಿವಿಧ ತಂಡದಿಂದ ಹಲವು ರೀತಿಯ ನೃತ್ಯ, ರೂಪಕ ಮತ್ತು ನಾಟಕ ಪ್ರದರ್ಶಿಸಲ್ಪಟ್ಟಿತು. ನಾಟಕ ಹಾಗೂ ರೂಪಕದಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಅಂಶಗಳು ಮೂಡಿಬಂದವು.

ಇದಕ್ಕೂ ಮೊದಲು ‘ಕೊಡಗ್‍ರ ಸಿಪಾಯಿ’ ಕೊಡವ ಸಿನಿಮಾ ಅಲ್ಲದೇ, ‘ನೆಪ್ಪ್‍ರಜೊಪ್ಪೆ’ ಮತ್ತು ‘ಬಾಳ್‍ರಬಟ್ಟೆಲ್’ ಎಂಬ ಎರಡು ಕಿರುಚಿತ್ರವನ್ನು ಸಮಾರಂಭದಲ್ಲಿ ಪ್ರದರ್ಶಿಸಲಾಯಿತು. ಸಮಾರೋಪ ಸಮಾರಂಭದಲ್ಲಿ 25ಕ್ಕೂ ಅಧಿಕ ವಿವಿಧ ದತ್ತಿನಿದಿಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದನ ವಿತರಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೇಕ್‍ಮಾಡ ರಾಜೀವ್ ಬೋಪಯ್ಯ ಮಾತನಾಡಿ ಹಿರಿಯರು ಬೆಳಗಿಸಿದ ದೀಪದ ಬೆಳಕಿನಲ್ಲಿ ನಾವು ಸಂಸ್ಥೆಯನ್ನು ಬೆಳೆಸುತ್ತಿದ್ದೇವೆ. 1994ರಲ್ಲಿ ಚಿಕ್ಕಕೋಣೆಯಲ್ಲಿ 5 ಮಕ್ಕಳೊಂದಿಗೆ ಹಿರಿಯರ ದೂರದೃಷ್ಟಿಯಿಂದ ಸ್ಥಾಪನೆಯಾದ ವಿದ್ಯಾಸಂಸ್ಥೆಯಲ್ಲಿ ಇದೀಗ 300 ವಿದ್ಯಾರ್ಥಿಗಳೊಂದಿಗೆ ಬೆಳ್ಳಿಹಬ್ಬ ಆಚರಿಸಿಕೊಳ್ಳುವ ಮಟ್ಟಕ್ಕೆ ಬೆಳೆಯಲು ಹಿರಿಯರ ನೆರವು ಕಾರಣವಾಗಿದೆ. ದಿ.ಚಿರಿಯಪಂಡ ಪಿ.ಕುಶಾಲಪ್ಪ ಅವರ ಮಕ್ಕಳು ನೀಡಿದ 17 ಸೆಂಟ್ ಜಾಗ, ಕಾಟಿಮಾಡ ಅಪ್ಪಯ್ಯ ಹಾಗೂ ಮಕ್ಕಳು ನೀಡಿದ 78 ಸೆಂಟ್ ಜಾಗ ಸೇರಿದಂತೆ ಹಿರಿಯರ ನೆರವಿಗೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.

ಮಕ್ಕಳನ್ನು ಪರಿಪೂರ್ಣ ಶಿಕ್ಷಣ ನೀಡುವತ್ತ ರೂಪಿಸುವದರೊಂದಿಗೆ ವಿದ್ಯಾಸಂಸ್ಥೆಯ ಶಿಕ್ಷಣ ಮಟ್ಟ ಮಾಪನವೂ ಫಲಿತಾಂಶದ ಮೇಲೆ ಅಡಗಿದೆ. ಅಲ್ಲದೆ, ಪ್ರತಿವಿದ್ಯಾರ್ಥಿ ಪಡೆಯುವ ಉತ್ತಮ ಅಂಕಗಳ ಮೇಲೆ ವಿದ್ಯಾರ್ಥಿಯ ಭವಿಷ್ಯ ನಿಂತಿದೆ. ವಿದ್ಯಾಸಂಸ್ಥೆಯ ಹಾಗೂ ವಿದ್ಯಾರ್ಥಿಯ ಭವಿಷ್ಯ ಎರಡನ್ನೂ ರೂಪಿಸುವದು ಶಿಕ್ಷಕರ ಕೈಯಲ್ಲಿದೆ ಎಂದು ಹೇಳಿದ ಅವರು ಈ ನಿಟ್ಟಿನಲ್ಲಿ ಶಿಕ್ಷಕರ ಜವಾಬ್ದಾರಿ ಇದೆ ಎಂದು ಹೇಳಿದರು.

ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷೆ ಮಲ್ಚೀರ ಆಶಾಗಣೇಶ್ ಮಾತನಾಡಿ ವಿದ್ಯಾಸಂಸ್ಥೆಯ ಎಲ್ಲಾ ತರಗತಿಯ ಪ್ರತಿ ವಿದ್ಯಾರ್ಥಿಗಳಿಗೂ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳ ವೇದಿಕೆ ಭಯ ಹೋಗಲಾಡಿಸಲು ಪ್ರಯತ್ನಿಸ ಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಮಂಡಚಂಡ ದಿನೇಶ್‍ಚಿಟ್ಟಿಯಪ್ಪ, ಕಾರ್ಯದರ್ಶಿ ಮೂಕಳಮಾಡ ಅರಸುನಂಜಪ್ಪ, ಪೊನ್ನಂಪೇಟೆ ಕೊಡವ ಸಮಾಜದ ಉಪಾಧ್ಯಕ್ಷ ಚೆಪ್ಪುಡೀರ ಬೋಪಣ್ಣ, ಕಾರ್ಯದರ್ಶಿ ಪೊನ್ನಿಮಾಡ ಸುರೇಶ್, ಜಂಟಿ ಕಾರ್ಯದರ್ಶಿ ಅಪ್ಪಂಡೇರಂಡ ಶಾರದ, ಖಜಾಂಚಿ ಮೂಕಳೇರ ಲಕ್ಷ್ಮಣ, ಖಾಯಂ ಆಹ್ವಾನಿತ ನಿರ್ದೇಶಕ ಚೆಪ್ಪುಡಿರ ಕಿಟ್ಟುಅಯ್ಯಪ್ಪ, ನಿರ್ದೇಶಕರುಗಳಾದ ಮಲ್ಲಮಾಡ ಪ್ರಭುಪೂಣಚ್ಚ, ಅಡ್ಡಂಡ ಸುನಿಲ್‍ಸೋಮಯ್ಯ, ಚೆಪ್ಪುಡೀರ ರಾಕೇಶ್‍ದೇವಯ್ಯ, ಚೆಪ್ಪುಡಿರ ರೂಪಉತ್ತಪ್ಪ, ಚೊಟ್ಟೆಕಾಳಪಂಡ ಆಶಾಪ್ರಕಾಶ್, ಮುಖ್ಯೋಪದ್ಯಾಯಿನಿ ಮಲ್ಚೀರ ತನುಜಚಂಗಪ್ಪ ಹಾಜರಿದ್ದರು.