ಮಡಿಕೇರಿ, ನ. 23: ಕೇರಳ ರಾಜ್ಯದ ಕಾಂಞಂಗಾಡ್‍ನಿಂದ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಭಾಗಮಂಡಲ-ಕರಿಕೆ ರಸ್ತೆ ಅಭಿವೃದ್ಧಿ ಕಾಣದೆ ದಶಕಗಳೇ ಕಳೆದಿದ್ದು, ಇದೀಗ ಈ ರಸ್ತೆ ವಾಹನ ಸಂಚಾರಕ್ಕೆ ಮಾತ್ರವಲ್ಲದೆ, ಕಾಲ್ನಡಿಗೆಗೂ ಯೋಗ್ಯವಿಲ್ಲದಂತಾಗಿದೆ.

ಕೊಡಗಿನ ಗಡಿಭಾಗವಾದ ಕರಿಕೆ ಗ್ರಾಮ ಕೇರಳದ ಕಾಸರಗೋಡು ಜಿಲ್ಲೆಗೆ ಹೊಂದಿಕೊಂಡಂತಿದ್ದು, ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿಗೆ ಸಮೀಪದಲ್ಲಿದೆ. ಕರಿಕೆಯಿಂದ ಕೊಡಗಿನ ಜಿಲ್ಲಾ ಕೇಂದ್ರವಾದ ಮಡಿಕೇರಿಗೆ ಸುಮಾರು 70 ಕಿ.ಮೀ. ದೂರವಿದ್ದರೆ, ಸುಳ್ಯ ತಾಲೂಕು ಕೇಂದ್ರ ಕೇವಲ 22 ಕಿ.ಮೀ. ಅಂತರದಲ್ಲಿದೆ. ಕೇರಳದ ಪ್ರಮುಖ ಪಟ್ಟಣಗಳಲ್ಲೊಂದಾದ ಕಾಂಞಂಗಾಡ್‍ಗೆ ಕೇವಲ 20 ಕಿ.ಮೀ ಅಂತರವಿದೆ. ಆದರೆ ಕೊಡಗು ಜಿಲ್ಲೆಗೆ ಸೇರಿದ ಕರಿಕೆ ಗ್ರಾಮ ಪಂಚಾಯಿತಿಯ ಜನರು ತಮ್ಮ ಕೆಲಸ ಕಾರ್ಯಗಳಿಗೆ 70 ಕಿ.ಮೀ. ದೂರದಲ್ಲಿರುವ ತಾಲೂಕು ಹಾಗೂ ಜಿಲ್ಲಾ ಕೇಂದ್ರವಾದ ಮಡಿಕೇರಿಗೆ ಪ್ರತಿನಿತ್ಯ ಸಂಚರಿಸಬೇಕಾಗಿದ್ದು, ಅವರ ಸಂಚಾರಕ್ಕೆ ಇರುವ ಅತಿ ಹತ್ತಿರದ ಸಂಪರ್ಕ ರಸ್ತೆಯೆಂದರೆ ಅದು ಭಾಗಮಂಡಲ-ಕರಿಕೆ ರಸ್ತೆಯಾಗಿದೆ.

ಹೆಸರಿಗೆ ಭಾಗಮಂಡಲ-ಕರಿಕೆ ರಸ್ತೆ ಅಂತರರಾಜ್ಯಗಳ ಸಂಪರ್ಕ ರಸ್ತೆ ಯಾಗಿದ್ದರೂ, ಲೋಕೋಪಯೋಗಿ ಇಲಾಖೆಯ ದಾಖಲೆಗಳ ಪ್ರಕಾರ ಇದು ಜಿಲ್ಲಾ ಮುಖ್ಯ ರಸ್ತೆ (ಎಂಡಿಆರ್) ಎಂದೇ ಪರಿಗಣಿಸಲ್ಪಟ್ಟಿದೆ. ಆದರೆ ಈ ರಸ್ತೆಗೆ ಕಾಯಕಲ್ಪ ನೀಡುವ ಬಗ್ಗೆ ಲೋಕೋಪ ಯೋಗಿ ಇಲಾಖೆಯಾಗಲಿ, ಕರ್ನಾಟಕ ರಾಜ್ಯ ಸರಕಾರವಾಗಲಿ ಆಸಕ್ತಿ ತೋರುತ್ತಿಲ್ಲ ಎಂಬದಕ್ಕೆ ಈ ರಸ್ತೆಯ ಇಂದಿನ ದುಸ್ಥಿತಿಯೇ ಉದಾಹರಣೆಯಾಗಿದೆ.

ಕೊಡಗು ಜಿಲ್ಲೆಯ ಇತರ ಅಂತರರಾಜ್ಯ ಸಂಪರ್ಕ ರಸ್ತೆಗಳು ಒಂದಷ್ಟರ ಮಟ್ಟಿಗೆ ಉತ್ತಮವಾಗಿವೆ ಎಂದು ಹೇಳಬಹುದಾದರೂ, ನೆರೆಯ ಕೇರಳ ರಾಜ್ಯಕ್ಕೆ ಹೋಲಿಸಿದರೆ ಇಲ್ಲಿನ ರಸ್ತೆಗಳು ಕೊಡಗಿಗೆ ಮಾತ್ರವಲ್ಲದೆ, ಕರ್ನಾಟಕ ರಾಜ್ಯಕ್ಕೂ ಕಪ್ಪು ಚುಕ್ಕೆಯಂತಿವೆ. ಭಾಗಮಂಡಲ- ಕರಿಕೆ ರಸ್ತೆಯು ಅಂತರ ರಾಜ್ಯ ಸಂಪರ್ಕ ರಸ್ತೆಯಾಗಿರುವುದು ಮಾತ್ರವಲ್ಲದೆ, ಕೊಡಗಿನ ಪ್ರಮುಖ ತೀರ್ಥಕ್ಷೇತ್ರವಾದ ತಲಕಾವೇರಿ ಹಾಗೂ ಇಸ್ಲಾಂನ ಧಾರ್ಮಿಕ ಕೇಂದ್ರ ಎಮ್ಮೆಮಾಡು ಕ್ಷೇತ್ರಗಳನ್ನು ಸಂಪರ್ಕಿಸುವ ರಸ್ತೆಯೂ ಆಗಿರುವುದರಿಂದ ಈ ರಸ್ತೆ ಮಹತ್ವವನ್ನು ಪಡೆದುಕೊಂಡಿದೆ. ಅಲ್ಲದೆ ಕೊಡಗು ಮತ್ತು ರಾಜ್ಯದ ಪ್ರವಾಸೋದ್ಯಮದ ಅಭಿವೃದ್ಧಿಗೂ ಈ ರಸ್ತೆ ಪೂರಕವಾಗಿದೆ.

2018ರಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿದುಕೊಂಡಿತ್ತು. ಅಂತಹ ಸಂದರ್ಭದಲ್ಲಿ ಹಲವು ತಿಂಗಳುಗಳ ಕಾಲ ಭಾಗಮಂಡಲ- ಕರಿಕೆ ರಸ್ತೆಯೇ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ರಸ್ತೆಯಾಗಿ ಬಳಕೆಯಾಗಿತ್ತು.

ಆದರೂ ಅದೇಕೋ ಈ ರಸ್ತೆಯ ಬಗ್ಗೆ ಸಂಬಂಧಿಸಿದ ಇಲಾಖೆಗಳಾಗಲಿ, ಜನಪ್ರತಿನಿಧಿಗಳಾಗಲಿ, ರಾಜ್ಯ ಸರಕಾರವಾಗಲಿ, ಕೇಂದ್ರ ಸರಕಾರವಾಗಲಿ ಗಮನಹರಿಸಿದಂತೆ ಕಾಣುತ್ತಿಲ್ಲ.

ಈ ರಸ್ತೆ ಭಾಗಮಂಡಲದಿಂದ ಕರಿಕೆವರೆಗೂ ರಕ್ಷಿತಾರಣ್ಯದ ನಡುವೆಯೇ ಸಾಗುತ್ತಿರುವುದರಿಂದ ದಾರಿಯುದ್ದಕ್ಕೂ ಇರುವ ಮರಗಳಿಂದ ಬೀಳುವ ನೀರಿನ ಹೊಡೆತ ಹಾಗೂ ಅತಿಯಾದ ತೇವಾಂಶದಿಂದಾಗಿ ಈ ರಸ್ತೆ ತನ್ನ ಧಾರಣಾ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಹಾಳಾಗುತ್ತದೆ. ಅಂತಹದ್ದರಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬಹುತೇಕ ಎಲ್ಲಾ ವಾಹನಗಳು ಈ ರಸ್ತೆಯ ಮೂಲಕವೇ ಸಂಚರಿಸಿದ್ದರಿಂದಾಗಿ ಮೊದಲೇ ಗುಂಡಿಮಯವಾಗಿದ್ದ ರಸ್ತೆ ಇದೀಗ ವಾಹನ ಸಂಚಾರಕ್ಕೆ ಅಯೋಗ್ಯ ವಾಗಿದೆ.

ಈ ರಸ್ತೆಯ ಸುಮಾರು 16 ಕಿ.ಮೀ. ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಈ ಭಾಗದ ರಸ್ತೆ ನಡೆದಾಡಲೂ ಯೋಗ್ಯವಿಲ್ಲ ದಂತಾಗಿದೆ. 2018-19ನೇ ಸಾಲಿನಲ್ಲಿ ಸುಮಾರು 1.29 ಕಿ.ಮೀ ದೂರವನ್ನು ಮರು ಡಾಮರೀಕರಣ ಮಾಡಲಾಗಿ ತ್ತಾದರೂ, ಅದು ಸಂಪೂರ್ಣ ಕಿತ್ತುಹೋಗಿದೆ. ಮಳೆಗಾಲದಲ್ಲಿ ಅಲ್ಲಲ್ಲಿ ಮಣ್ಣು ಕುಸಿದು ರಸ್ತೆಯ ಮೇಲೆ ಬಿದ್ದಿದ್ದು, ಮೊದಲೇ ಅಗಲ ಕಿರಿದಾಗಿರುವ ಈ ರಸ್ತೆಯ ಮಣ್ಣು ತೆರವುಗೊಳಿಸದ ಪರಿಣಾಮ ವಾಹನ ಸಂಚಾರಕ್ಕೆ ತೀರಾ ತೊಡಕಾಗಿದೆ. ಸಾಮಾನ್ಯವಾಗಿ ತಲಕಾವೇರಿ ಜಾತ್ರೆಯ ಸಂದರ್ಭ ರಸ್ತೆಯ ಇಕ್ಕೆಲಗಳ ಮಣ್ಣು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆಯಾದರೂ ಈ ಬಾರಿ ಆ ಕಾರ್ಯವನ್ನೂ ಲೋಕೋಪ ಯೋಗಿ ಇಲಾಖೆ ನಡೆಸಿಲ್ಲ.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರವಿದ್ದಾಗ 2017-18ನೇ ಸಾಲಿನಲ್ಲಿ ಈ ರಸ್ತೆಯ ಅಭಿವೃದ್ಧಿಗೆ ಸುಮಾರು ರೂ. 4 ಕೋಟಿ ಮಂಜೂರಾಗಿತ್ತು. ಆದರೆ ಅಂದಿನ ಜಿಲ್ಲಾಧಿಕಾರಿಗಳಿಗೆ ಹಾಗೂ ಉಸ್ತುವಾರಿ ಸಚಿವರಾಗಿದ್ದ ಸಾ.ರಾ. ಮಹೇಶ್ ಅವರಿಗೆ ಕರಿಕೆ ಗ್ರಾಮಸ್ಥರು ಸಲ್ಲಿಸಿದ ಮನವಿಗೆ ಯಾವದೇ ಸ್ಪಂದನ ದೊರಕದ ಪರಿಣಾಮ ಇಂದಿಗೂ ರಸ್ತೆ ಅಭಿವೃದ್ಧಿಯಾಗದೆ ಆಡಳಿತ ವ್ಯವಸ್ಥೆಯನ್ನು ಅಣಕಿಸುತ್ತಿದೆ.

ಅದರೊಂದಿಗೆ ಈ ರಸ್ತೆಯನ್ನು ಕಾಂಞಂಗಾಡ್‍ನಿಂದ ಕಾಟಕೇರಿ ಮೂಲಕ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 2017ರಲ್ಲಿ ರಾಷ್ಟ್ರೀಯ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ಸಮೀಕ್ಷೆ ನಡೆಸಿ ವಿಸ್ತøತ ಯೋಜನಾ ವರದಿ ತಯಾರಿಸಲು ಕೇಂದ್ರ ಸರಕಾರ ನಿರ್ದೇಶನ ನೀಡಿದೆ.

ಅದರನ್ವಯ ಕೇರಳ ರಾಜ್ಯ ಸರಕಾರವು ತನ್ನ ರಾಜ್ಯದ ಗಡಿಭಾಗದವರೆಗೆ ಸರ್ವೆ ಮಾಡಿ ಯೋಜನಾ ವರದಿ ತಯಾರಿಸಿದ್ದರೂ, ಕರ್ನಾಟಕದ ಭಾಗದಲ್ಲಿ ಮಾತ್ರ ಈ ಕಾರ್ಯ ನಡೆಯದೆ ಇಂದಿಗೂ ನೆನೆಗುದಿಗೆ ಬಿದ್ದಿದೆ. ಮಾತ್ರವಲ್ಲದೆ, 2004 ರಿಂದೀಚೆಗೆ ಈ ರಸ್ತೆಯ ಅಗಲೀಕರಣಕ್ಕೂ ಸರಕಾರ ಯಾವದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಕರಿಕೆ ಗ್ರಾಮದ ನಿವಾಸಿಗಳು.

ಡಿ. 4 ರಂದು ಕರಿಕೆ ಬಂದ್ : ಪತ್ರಿಕಾಗೋಷ್ಠಿ ನಡೆಸಿರುವ ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಬಾಲಚಂದ್ರ ನಾಯರ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ರಮಾನಾಥ್, ಕರಿಕೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೇಕಲ್ ಡಿ. ದೇವರಾಜ್ ಹಾಗೂ ಕರಿಕೆ ಗ್ರಾ.ಪಂ. ಸದಸ್ಯ ಬಿ.ಕೆ. ಪುರುಷೋತ್ತಮ ಅವರುಗಳು ರಾಜ್ಯ ಸರಕಾರ, ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾಗಮಂಡಲ-ಕರಿಕೆ ರಸ್ತೆಯನ್ನು ಅಭಿವೃದ್ಧಿಪಡಿಸಲು ಇದುವರೆಗೆ ಕರಿಕೆ ವ್ಯಾಪ್ತಿಯ ಎಲ್ಲಾ ಜನರು ವಿವಿಧ ಸಂದರ್ಭಗಳಲ್ಲಿ ಜನಪ್ರತಿನಿಧಿಗಳನ್ನು ವಿನಂತಿಸಿಕೊಂಡಿದ್ದಾರೆ. ಆದರೂ ಶಾಸಕರು, ಸಂಸದರಾದಿಯಾಗಿ ಎಲ್ಲರೂ ರಸ್ತೆಯ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೋರಾಟ ನಡೆಸುವದೊಂದೇ ಪರ್ಯಾಯ ಮಾರ್ಗವಾಗಿ ರುವದರಿಂದ ಡಿ. 4 ರಂದು ಕರಿಕೆ ಬಂದ್ ಮೂಲಕ ಪ್ರತಿಭಟನೆ ನಡೆಸಲಾಗುವದು ಎಂದು ರಮಾನಾಥ್ ತಿಳಿಸಿದ್ದಾರೆ.