ಕೂಡಿಗೆ, ನ. 22: ಐದು ಸಾವಿರ ರೂಪಾಯಿಗಳನ್ನು ಬಂಡವಾಳ ಹೂಡಿಕೆಯ ಮೂಲಕ ಅಮ್ಮಂಬಾಲ್ ಸುಬ್ಬರಾವ್ ಪೈ ಅವರು 1906 ರಲ್ಲಿ ಕೆನರಾ ಹಿಂದೂ ಪರ್ಮನೆಂಟ್ ಫಂಡ್ ಎಂಬ ಹೆಸರಿನಿಂದ ಗ್ರಾಹಕರಿಗೆ ಸೇವೆಯನ್ನು ಮಾಡಲು ಮುಂದಾಗಿ ಇಂದು ಅದರ ಪ್ರಯತ್ನದ ಫಲವೇ ಕೆನರಾ ಬ್ಯಾಂಕ್ ಆಗಿ ಭಾರತ ಸೇರಿದಂತೆ ಐದು ಶಾಖೆಗಳು ವಿಶ್ವದಲ್ಲಿ ತನ್ನ ಸೇವೆಯನ್ನು ಸಲ್ಲಿಸುತ್ತಿದೆ ಎಂದು ಕೂಡಿಗೆ ಕೆನರಾ ಬ್ಯಾಂಕ್‍ನ ವ್ಯವಸ್ಥಾಪಕ ಕಿಶೋರ್‍ಕುಮಾರ್ ಹೇಳಿದರು.

ಕೆನರಾ ಬ್ಯಾಂಕ್ ಸಂಸ್ಥಾಪಕ ದಿ. ಅಮ್ಮಂಬಾಲ್ ಸುಬ್ಬರಾವ್ ಪೈ ಅವರ ಹುಟ್ಟುಹಬ್ಬದ ಅಂಗವಾಗಿ ಕೂಡಿಗೆ ಕೆನರಾ ಬ್ಯಾಂಕ್‍ನಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆ ಕುರಿತು ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಸುಮಾರು 25 ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಕಳೆದ ತ್ರೈಮಾಸಿಕ ಅವಧಿಯಲ್ಲಿ ಕೂಡಿಗೆ ಕೆನರಾ ಬ್ಯಾಂಕ್ ಶಾಖೆಯು ಮೊದಲ ಸ್ಥಾನಗಳಿಸಿದ್ದು, ನಮ್ಮ ಶಾಖೆಗೆ ಹೆಮ್ಮೆಯ ವಿಷಯ ಹಾಗೂ ಕಳೆದ ವರ್ಷದ ಅವಧಿಯಲ್ಲಿ 54 ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದು, ಈ ವರ್ಷದಲ್ಲಿ 72 ಕೋಟಿ ರೂಪಾಯಿ ವ್ಯವಹಾರ ಮಾಡಲು ಗ್ರಾಹಕರ ಸಹಕಾರ ತುಂಬಾ ಮುಖ್ಯವಾಗಿದೆ ಎಂದು ತಿಳಿಸಿದರು.

ಭಾರತಾದ್ಯಂತ ಸುಮಾರು 6000 ಕ್ಕೂ ಹೆಚ್ಚು ಶಾಖೆಗಳು ಇದ್ದು, ಪ್ರಪಂಚದ ಐದು ದೇಶಗಳಲ್ಲಿ ನಮ್ಮ ಕೆನರಾ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ. ಈ ನಮ್ಮ ಕೂಡಿಗೆ ಶಾಖೆಯು ಸುಮಾರು 42 ವರ್ಷಗಳಿಂದ ಸೇವೆಯನ್ನು ಮಾಡುತ್ತಾ ಬಂದಿದ್ದು, ಇನ್ನೂ ಮುಂದಕ್ಕೆ ನಮ್ಮ ಎಲ್ಲಾ ಕೆನರಾ ಬ್ಯಾಂಕ್ ಶಾಖೆಗಳಲ್ಲಿ ಹಲವಾರು ಸಾಲ ಯೋಜನೆಯನ್ನು ನೀಡಲಾಗುತ್ತಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಿಕೊಂಡರು.

ಗ್ರಾಹಕರಾದ ಚಂಪಾ ಹಾಗೂ ಹರಿಪ್ರಸಾದ್ ಮಾತನಾಡಿ, ನೆರೆದಿದ್ದ ಗ್ರಾಹಕರಲ್ಲಿ ಜಾಗೃತಿ ಮಾಡಿಸುವ ಸಲುವಾಗಿ ಜನಗಳು ಇಂದಿನ ದಿನದಲ್ಲಿ ಕಾಸಿನ ಬಡ್ಡಿಗೆ ಹಣ ಪಡೆದು ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆಗೆ ಗುರಿಯಾಗುತ್ತಿದ್ದಾರೆ. ಬ್ಯಾಂಕುಗಳಿಂದ ಸಿಗುತ್ತಿರುವ ಸೌಲಭ್ಯಗಳನ್ನು ಪ್ರತಿಯೊಬ್ಬ ನಾಗರಿಕರು ತಿಳಿದುಕೊಂಡು ಈ ಸೌಲಭ್ಯಗಳನ್ನು ಉಪಯೋಗ ಪಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮವನ್ನು ಶಾಖೆಯ ಹೆಚ್.ಪಿ. ಶಿವಕುಮಾರ್ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕ್ ಸಿಬ್ಬಂದಿಗಳಾದ ಗೋಕುಲ್, ವಿಷ್ಣು, ಆಮನೀ, ಉಮಾವತಿ, ಮಂಜುಳ ಹಾಗೂ ಗ್ರಾಹಕರು ಭಾಗವಹಿಸಿದ್ದರು.