ಮಡಿಕೇರಿ, ನ. 23: ಕಾವೇರಿ ಮಹಾ ಆರತಿ ಬಳಗ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಮತ್ತು ಕಾವೇರಿ ರಿವರ್ ಸೇವಾ ಟ್ರಸ್ಟ್‍ನ ಸಂಯುಕ್ತ ಆಶ್ರಯದಲ್ಲಿ “ಕಾವೇರಿ ನದಿಹಬ್ಬ” ಕಾರ್ಯಕ್ರಮ ತಾ. 29 ಮತ್ತು 30 ರಂದು ಕುಶಾಲನಗರದ ಕಾವೇರಿ ನದಿ ತಟದಲ್ಲಿ ನಡೆಯಲಿದೆ.

ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಕಾವೇರಿ ರಿವರ್ ಸೇವಾ ಟ್ರಸ್ಟ್‍ನ ಅಧ್ಯಕ್ಷ ಎಂ.ಎನ್. ಚಂದ್ರ ಮೋಹನ್, ಜೀವನದಿ ಕಾವೇರಿಯ ಸಂರಕ್ಷಣೆ ಮತ್ತು ಪಾವಿತ್ರ್ಯತೆಯನ್ನು ಉಳಿಸುವ ನಿಟ್ಟಿನಲ್ಲಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಕಳೆದ 9 ವರ್ಷಗಳಿಂದ ಪ್ರತಿ ತಿಂಗಳ ಹುಣ್ಣಿಮೆಯಂದು ಕಾವೇರಿ ನದಿಗೆ ಮಹಾ ಆರತಿ ಬೆಳಗುತ್ತಾ ಬರಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮ ನೂರರ ಸಂಭ್ರಮದ ಗಡಿ ದಾಟಿರುವ ಹಿನ್ನೆಲೆ ಕಾವೇರಿ ನದಿ ಹಬ್ಬವನ್ನು ಆಯೋಜಿಸ ಲಾಗಿದೆ ಎಂದು ತಿಳಿಸಿದರು.

ಪವಿತ್ರ ಕಾವೇರಿ ನದಿಯನ್ನು ಕಲ್ಮಷಗೊಳಿಸದಂತೆ ಜನ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮ ಗಳನ್ನು ಕಾವೇರಿ ನದಿ ಜಾಗೃತಿ ಸಮಿತಿ ಕಾರ್ಯರೂಪಕ್ಕೆ ತಂದಿದೆ. ಕಳೆದ ಒಂಭತ್ತು ವರ್ಷಗಳಿಂದ ಪ್ರತಿ ಹುಣ್ಣಿಮೆಯಂದು ಜೀವನದಿ ಕಾವೇರಿಗೆ ಪೂಜೆಯನ್ನು ಸಲ್ಲಿಸುತ್ತಾ ಕಾವೇರಿಯ ಪಾವಿತ್ರ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗಿದೆ. ಇದೀಗ ಎರಡು ದಿನಗಳ ಕಾಲ ಕಾವೇರಿ ನದಿ ಹಬ್ಬ ನಡೆಯಲಿದ್ದು, ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿಯ ಕಾವೇರಿ ನದಿ ತಟದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸುತ್ತಮುತ್ತಲ ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ತಜ್ಞರು ಸಂವಾದ ನಡೆಸಲಿದ್ದಾರೆ ಎಂದರು.

ತಾ. 29 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ವಿದ್ಯಾರ್ಥಿಗಳ ಸಮಾವೇಶದಲ್ಲಿ ವೃಕ್ಷ ಮಾತೆ ಪದ್ಮಶ್ರೀ ಡಾ. ಸಾಲುಮರದ ತಿಮ್ಮಕ್ಕ , ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ, ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ನಿವೃತ್ತ ಅಧಿಕಾರಿ ಡಾ. ಹೆಚ್.ಎಸ್.ಎಂ. ಪ್ರಕಾಶ್ ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ ವಿಷಯ ತಜ್ಞರಿಂದ ಕಾರ್ಯಾಗಾರ ಹಾಗೂ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಸುತ್ತೂರು ಕ್ಷೇತ್ರದ ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಹಾಗೂ ನಾಡಿನ ಮಠಾಧೀಶರು, ಸಾಧು ಸಂತರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಪವಿತ್ರ ಕಾರ್ತಿಕ ಮಾಸವಾದ ಕಾರಣ ಅಂದು ಸಂಜೆ 6 ಗಂಟೆಗೆ ಕಾವೇರಿ ನದಿಗೆ ವಿಶೇಷ ‘ಮಹಾ ಆರತಿ’ ನಡೆಯಲಿದೆ ಯೆಂದು ಮಾಹಿತಿ ನೀಡಿದರು.

ಬೆಂಗಳೂರು ಆರ್ಟ್ ಆಫ್ ಲೀವಿಂಗ್‍ನ ಪ್ರಮುಖರಾದ ಸ್ವಾಮಿ ಸೂರ್ಯಪಾದ ಅವರ ತಂಡದಿಂದ ಸತ್ಸಂಗ ಕಾರ್ಯಕ್ರಮ ನಡೆಯಲಿದೆ. ತಾ. 30 ರಂದು ಬೆಳಿಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಗ್ರೀನ್ ಸಿಟಿ ಫೋರಂ ಮತ್ತು ಕುಶಾಲನಗರ ಪಟ್ಟಣ ಪಂಚಾಯ್ತಿ ಸಹಯೋಗ ದೊಂದಿಗೆ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಿಂದ ಸ್ವಚ್ಛತೆ ಮತ್ತು ಗಿಡ ನೆಡುವ ಕಾರ್ಯಕ್ರಮ ನಡೆಯಲಿದೆ.

ಅಂದು ಸಂಜೆ ಕುಶಾಲನಗರ ದೇವಾಲಯ ಒಕ್ಕೂಟದ ಆಶ್ರಯದಲ್ಲಿ ಕುಶಾಲನಗರ ಮಹಿಳಾ ಭಜನಾ ಮಂಡಳಿ ಸದಸ್ಯರಿಂದ ಭಜನೆ, ಕೀರ್ತನೆ, ಪ್ರಮುಖ ಅರ್ಚಕರಿಂದ ಅಷ್ಟೋತ್ತರ ಮತ್ತಿತರ ವಿಧಿ ವಿಧಾನಗಳು ಜರುಗಲಿವೆ. ಬಳಿಕ ಕಾವೇರಿ ನದಿ ಹಬ್ಬದ ಸಮಾರೋಪ ಸಮಾರಂಭ ಮಠಾಧೀಶರು, ಸಾಧು ಸಂತರ ಸಮ್ಮುಖದಲ್ಲಿ ನಡೆಯಲಿದ್ದು, ಇದೇ ಸಂದರ್ಭ ಕಾವೇರಿಗೆ ಮಹಾ ಆರತಿಯನ್ನು ಬೆಳಗಲಾಗುವುದು ಎಂದು ಚಂದ್ರಮೋಹನ್ ತಿಳಿಸಿದರು.

ಎರಡು ದಿನಗಳ ಕಾಲ ನಡೆಯುವ ಕಾವೇರಿ ನದಿ ಹಬ್ಬದಲ್ಲಿ ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ವಿವಿಧೆಡೆಗಳಿಂದ ಸಾಧು ಸಂತರು ಆಗಮಿಸಿ ಕಾವೇರಿ ನದಿಯ ಸಂರಕ್ಷಣೆ ಮತ್ತು ಪಾವಿತ್ರ್ಯತೆ ಕುರಿತು ಚರ್ಚಿಸಲಿದ್ದಾರೆ.

ಬೇಡಿಕೆಗಳು: ವಿಶೇಷವಾಗಿ ನದಿಯ ಪಾವಿತ್ರ್ಯತೆಯ ನಿಟ್ಟಿನಲ್ಲಿ ಜನಜಾಗೃತಿಗಾಗಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಿಂದ ಆರಂಭಗೊಂಡು ಆಯ್ದ ಪ್ರದೇಶಗಳು, ನದಿತಟಗಳಲ್ಲಿ ಮಹಾ ಆರತಿ ಕಟ್ಟೆ ನಿರ್ಮಾಣ, ಜಿಲ್ಲಾಡಳಿತ ಮತ್ತು ಸರ್ಕಾರಗಳ ಮೂಲಕ ನದಿಯ ಗಡಿ ಗುರುತು, ನದಿ ದಡದ ಅಭಿವೃದ್ಧಿಗೆ ಕಾರ್ಯ ಯೋಜನೆ, ರಿವರ್ ಪೊಲೀಸ್ ವಿಭಾಗ ಸ್ಥಾಪನೆ, ನದಿ ತಟಗಳ ಅಭಿವೃದ್ಧಿಯೊಂದಿಗೆ ನದಿ ಯನ್ನು ಉಳಿಸಿಕೊಳ್ಳುವದ ರೊಂದಿಗೆ ಪ್ರವಾಸೋದ್ಯಮದ ಬೆಳವಣಿಗೆಗೆ ಕ್ರಿಯಾಯೋಜನೆ ತಯಾರಿಸುವ ಕುರಿತು ಸಮಾವೇಶದಲ್ಲಿ ಚರ್ಚಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆÉಯಲಾಗುವದೆಂದರು.

‘ನಮಾಮಿ ಕಾವೇರಿ’ ಸ್ಮರಣ ಸಂಚಿಕೆ : ಕಾರ್ಯಕ್ರಮದಲ್ಲಿ ಕಾವೇರಿ ನದಿ ಧಾರ್ಮಿಕ ಹಿನ್ನೆಲೆ, ಪುರಾಣ, ಇತಿಹಾಸ ಬೆಳವಣಿಗೆ ಮತ್ತು ಸಮಿತಿಯ ಕಾರ್ಯಚಟುವಟಿಕೆಗಳ ದಾಖಲೆಗಳನ್ನು ಒಳಗೊಂಡ ವಿಶೇಷ ಸ್ಮರಣ ಸಂಚಿಕೆ ‘ನಮಾಮಿ ಕಾವೇರಿ’ ಯನ್ನು ಬಿಡುಗಡೆ ಮಾಡಲಾಗುತ್ತದೆ. ಹಿರಿಯ ಪತ್ರಕರ್ತರಾದ ಅನಿಲ್ ಹೆಚ್.ಟಿ., ಬಿ.ಸಿ. ದಿನೇಶ್ ಹಾಗೂ ಸಂಪತ್ ಕುಮಾರ್ ಸರಳಾಯ ಅವರ ನೇತೃತ್ವದ ಸಂಪಾದಕೀಯ ಮಂಡಳಿ ಸ್ಮರಣ ಸಂಚಿಕೆಯನ್ನು ರಚಿಸಲಿದೆ ಎಂದರು.

ಕಾವೇರಿ ನದಿ ಜಾಗೃತಿಯ ಕಾವೇರಿ ನದಿ ಹಬ್ಬ ಕಾರ್ಯಕ್ರಮಗಳಿಗೆ ಕುಶಾಲನಗರ ಪಟ್ಟಣ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕøತಿಕ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗ ಕೋರಲಾಗಿದೆ ಎಂದು ಚಂದ್ರ ಮೋಹನ್ ಇದೇ ಸಂದರ್ಭ ತಿಳಿಸಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ರೀನಾ ಪ್ರಕಾಶ್ ಹಾಗೂ ಸ್ಮರಣ ಸಂಚಿಕೆ ಸಂಪಾದಕೀಯ ಮಂಡಳಿಯ ಸಂಪತ್ ಕುಮಾರ್ ಸರಳಾಯ ಮಾತನಾಡಿ ಕಾವೇರಿ ಜಾಗೃತಿ ಆಂದೋಲನ ಯಶಸ್ವಿಯಾಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಕಾವೇರಿ ರಿವರ್ ಸೇವಾ ಟ್ರಸ್ಟ್‍ನ ಉಪಾಧ್ಯಕ್ಷರುಗಳಾದ ಕೆ.ಆರ್. ಶಿವನಂದನ್, ಡಿ.ಆರ್. ಸೋಮಶೇಖರ್ ಹಾಗೂ ಪ್ರಮುಖ ಅಕ್ಷಯ್ ಪನ್ಯಾಡಿ ಉಪಸ್ಥಿತರಿದ್ದರು.