ಶನಿವಾರಸಂತೆ, ನ. 22: ಸಮೀಪದ ಕೊಡ್ಲಿಪೇಟೆ ಹ್ಯಾಂಡ್ ಪೋಸ್ಟ್ನ ಮಸ್ಜಿದುನ್ನೂರ್ ವತಿಯಿಂದ ಪ್ರವಾದಿಯವರ ಜನ್ಮ ಮಾಸಾಚರಣೆ ಪ್ರಯುಕ್ತ ಈದ್ ವಿಲಾದುನ್ನಭಿ ಹಾಗೂ ಸ್ವಲಾತ್ ವಾರ್ಷಿಕೋತ್ಸವವನ್ನು 4 ದಿನಗಳವರೆಗೆ ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು.
ಬ್ಯಾಡಗೊಟ್ಟದ ಅರಬಿ ಮದ್ರಸದಿಂದ ಆರಂಭವಾದ ಈದ್ ಮಿಲಾದ್ ಸಂದೇಶ ಜಾಥಾ ಹ್ಯಾಂಡ್ ಪೋಸ್ಟ್ ವೃತ್ತದ ಮೂಲಕ ದೊಡ್ಡಕುಂದ ಜೂನಿಯರ್ ಕಾಲೇಜ್ ಜಂಕ್ಷನ್ಗಾಗಿ ನೂರ್ ಮಹಲ್ವರೆಗೆ ಸಾಗಿ ಸಮಾವೇಶಗೊಂಡಿತು. ಜಾಥಾದ ಮುಂಭಾಗ ರಾಷ್ಟ್ರಧ್ವಜ, ನಾಡಧ್ವಜ ಹಾಗೂ ಈದ್ ಮಿಲಾದ್ ಸಂಕೇತದ ಹಸಿರು ಧ್ವಜಗಳನ್ನು ಹಿಡಿದು ಸಾಗಿದ ತಜಲ್ಲಿಯಾತ್ ಮದ್ರಸ ವಿದ್ಯಾರ್ಥಿಗಳ ಸ್ಟಾಟ್ ಮತ್ತು ಧಪ್ ತಂಡಗಳು ನೋಡುಗರ ಕಣ್ಮನ ಸೆಳೆದವು. ವಿವಿಧ ವರ್ಣಗಳ ವೇಷಭೂಷಣ ಧರಿಸಿದ್ದ ನೂರ್ ಯೂತ್ ಅಸೋಸಿಯೇಷನ್ ಸದಸ್ಯರ ತಂಡಗಳು ಭಾರತ ದೇಶದ ಪ್ರಜೆಗಳು ನಾವು ಹಾಡುವೆವು ನವ ಸಂದೇಶವ ಎಂಬ ಸುಮಧುರ ಹಾಡಿನ ಧಪ್ ಪ್ರದರ್ಶನ ಜನ ಮೆಚ್ಚುಗೆಗೆ ಪಾತ್ರವಾಯಿತು.
ದಾರಿಯುದ್ದಕ್ಕೂ ಪ್ರವಾದಿ ಪ್ರೇಮಿಗಳು ಸಿಹಿ ತಿಂಡಿ ವಿತರಿಸಿದರು. ಎಸ್ಸಾರ್ ಪೆಟ್ರೋಲ್ ಬಂಕ್ ಮಾಲೀಕ ತೇಜಕುಮಾರ್ ಹಾಗೂ ದೊಡ್ಡಕುಂದ ಜಂಕ್ಷನ್ನಲ್ಲಿ ಜಯಂತ್ ಮತ್ತು ಗೆಳೆಯರ ಬಳದ ತಂಪು ಪಾನೀಯ ವಿತರಿಸಿ ಸೌಹಾರ್ದತೆ ಮೆರೆದರು.
ಪ್ರತಿದಿನ ಸಂಜೆ ಮಸ್ಜಿದುನ್ನೂರ್ ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಡೆದವು. ಮೊದಲ ದಿನ ಜಸೀಲ್ ಅಹ್ಸನಿ ಅವರು ಮಕ್ಕಳ ಲಾಲನೆ, ಪಾಲನೆ ಇಸ್ಲಾಮಿನಲ್ಲಿ ಎಂಬ ವಿಷಯದ ಬಗ್ಗೆ, 2ನೇ ದಿನ ಅಬೀದ್ ಹುದವಿ ಅವರು ದಾರಿ ತಪ್ಪುತ್ತಿರುವ ಯುವ ಸಮೂಹ ವಿಷಯದ ಬಗ್ಗೆ ಪ್ರವಚನ ನೀಡಿದರು. 3ನೇ ದಿನ ನೂರ್ ಯೂತ್ ಅಸೋಸಿಯೇಷನ್ ಸದಸ್ಯರು ನಡೆಸಿ ಪ್ರವಾದಿ ಕೀರ್ತನೆ, ಖವಾಲಿ. ಬುರ್ದಾ ಆಲಾಪನೆ ಜನಮನ ಸೂರೆಗೊಂಡಿರು.
4ನೇ ದಿನ ಅರಬಿ ಮದ್ರಸ ವಿದ್ಯಾರ್ಥಿಗಳಿಂದ ಇಸ್ಲಾಮಿಕ್ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಸಾಮೂಹಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಮಂದಿ ಸಹಭೋಜನ ಮಾಡಿದರು.
ಸಮಾರೋಪ ಸಮಾರಂಭದಲ್ಲಿ ದುವಾ ಹಾಗೂ ಸ್ವಲಾತ್ ನೇತೃತ್ವವನ್ನು ಸಯ್ಯದ್ ಅಲ್-ಅಝ್ಝರಿ ವಹಿಸಿದ್ದರು. ತಜಲ್ಲಿಯಾತ್ ಮದ್ರಸದ ಮುಖ್ಯ ಅಧ್ಯಾಪಕ ಅಶ್ರಫ್ ಮಿಶ್ರಾಹಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಸ್ಲಿದುನ್ನೂರ್ ಖತೀಬ ಹಾರೀಸ್ ಬಾಕವಿ ಕಂಡಕರೆ ಸಮಾರೋಪ ಭಾಷಣ ಮಾಡಿದರು. ಆಡಳಿತ ಮಂಡಳಿ ಅಧ್ಯಕ್ಷ ಡಿ.ಎ. ಸುಲೈಮಾನ್ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹನೀಫ್, ನಿರ್ದೇಶಕ ಝಹೀರ್ ನಿಝಾಮಿ, ಪ್ರಮುಖರಾದ ರಶೀದ್ ಅಮೀನ್, ಸಮೀದ್ ಸಖಾಫಿ, ಸಾದುಲು ಮುಸ್ಲಿಯಾರ್, ಇಬ್ರಾಹಿಂ, ಮಹಮ್ಮದ್, ಸಾಬ್ಜಾನ್, ರಫೀಕ್, ಬಾಸಿತ್, ಅಶ್ರಫ್, ಅಬ್ದುಲ್ ರಝಾಕ್, ಸುಲೈಮಾನ್ ಹಾಜಿ, ಅಬೂಬಕ್ಕದ್ ಹಾಜಿ, ಬಾಸಿತ್ ಹಾಜಿ, ಅಶ್ರಫ್, ರಹೀಂ, ಫರೂಕ್, ಸದಸ್ಯರು ಉಪಸ್ಥಿತರಿದ್ದರು.
ಶನಿವಾರಸಂತೆ ಪೊಲೀಸ್ ಠಾಣೆ ಎಸ್.ಬಿ. ಕೃಷ್ಣ ನಾಯಕ್, ಕೊಡ್ಲಿಪೇಟೆ ಉಪ ಪೊಲೀಸ್ ಠಾಣೆ ಎ.ಎಸ್.ಐ. ಈರಪ್ಪ, ಸಿಬ್ಬಂದಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.