ಮಡಿಕೇರಿ, ನ. 23: ಕೇಂದ್ರ ಕ್ಷಯರೋಗದ ವಿಭಾಗ ನವದೆಹಲಿ ಇವರ ಮಾರ್ಗ ಸೂಚಿಯಂತೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತಾ. 25 ರಿಂದ ಡಿಸೆಂಬರ್ 10 ರವರೆಗೆ ಸಕ್ರಿಯ ಕ್ಷಯ ರೋಗ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಅದರಂತೆ ಕೊಡಗು ಜಿಲ್ಲೆಯಲ್ಲೂ ಸಹ ಕಾರ್ಯಕ್ರಮ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕ್ಷಯ ರೋಗದ ಮಾರ್ಗಸೂಚಿಯನ್ವಯ ಶೇ. 15 ರಿಂದ 20 ರಷ್ಟು ಜನ ಸಂಖ್ಯೆಯನ್ನು ದುರ್ಬಲ ಗಂಡಾಂತರಕಾರಿ ಹಿಂದುಳಿದ ಪ್ರದೇಶ ಮತ್ತು ಉದ್ದೇಶಿತ ಜನಸಂಖ್ಯೆಯೆಂದು ಗುರುತಿಸಲಾಗಿದೆ. ಸುಮಾರು 1,44,085 ಜನ ಸಂಖ್ಯೆಯನ್ನು ಸಕ್ರೀಯ ಕ್ಷಯ ರೋಗ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮ ನಡೆಸಲು ಗುರುತಿಸಲಾಗಿದೆ,
ಮಡಿಕೇರಿ ತಾಲೂಕಿನ 11,035 ಮನೆಗಳು ಹಾಗೂ 42,903 ಗುರುತಿಸಿದ ಜನಸಂಖ್ಯೆ ವೀರಾಜಪೇಟೆ ತಾಲೂಕಿನ 1153 ಹಾಗೂ 4,09,973 ಗುರುತಿಸಿದ ಜನಸಂಖ್ಯೆ ಮತ್ತು ಸೋಮವಾರಪೇಟೆ ತಾಲೂಕಿನ 14,511 ಮನೆಗಳು ಹಾಗೂ 60,209 ಗುರುತಿಸಿದ ಜನಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.
ಈ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಶಾ ಕಾರ್ಯಕರ್ತರು ವೈದ್ಯಾಧಿಕಾರಿಗಳು, ಕಿ.ಮ.ಆ.ಸ ಮತ್ತು ಕಿ.ಪು.ಆ.ಸ ಹಿರಿಯ ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರಿಗೆ ಈ ಬಗ್ಗೆ ತಾಲೂಕುವಾರು ತರಬೇತಿ ನೀಡಿದ್ದು ಜಿಲ್ಲೆಯಲ್ಲಿ ಒಟ್ಟು 37,081 ಉದ್ದೇಶಿತ ಮನೆಗಳನ್ನು ಸಮಿಕ್ಷೆ ನಡೆಸಿ ಕ್ಷಯರೋಗದ ಆಂದೋಲನವನ್ನು ನಡೆಸಲು ತೀರ್ಮಾನಿಸಲಾಗಿದೆ. ಹಾಗೆಯೇ ಜಿಲ್ಲೆಯ ಎಲ್ಲಾ ಗಿರಿಜನ ಹಾಡಿಗಳನ್ನು ಕಡ್ಡಾಯವಾಗಿ ಈ ಅವಧಿಯಲ್ಲಿ ಸಮೀಕ್ಷೆ ನಡೆಸಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಈ ಅವಧಿಯಲ್ಲಿ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ತಂಡವು ಮನೆಮನೆಗೆ ಭೇಟಿ ನೀಡಿ ಕ್ಷಯರೋಗದ ಲಕ್ಷಣಗಳಿರುವ ಶಂಕಿತ ರೋಗಗಳ ಕಫದ ಮಾದರಿಯನ್ನು ಸಹ ಸ್ಥಳದಲ್ಲಿಯೇ ಸಂಗ್ರಹಿಸಿ ಸಮೀಪದ ನಿಯೋಜಿತ ಕಫ ಪರೀಕ್ಷಾ ಕೇಂದ್ರಗಳಿಗೆ ಕಫ ಪರೀಕ್ಷೆ ನಡೆಸಲು ಸಾಗಿಸಲಾಗುವದು. ಶಂಕಿತ ರೋಗಿಗಳ ಕಫದಲ್ಲಿ ಯಾವುದೇ ಕ್ಷಯ ರೋಗದ ಕ್ರಿಮಿಗಳು ಪತ್ತೆಯಾಗದೆ ಇದ್ದಲ್ಲಿ ರೋಗಿಗಳಿಗೆ ಉಚಿತವಾಗಿ ಕ್ಷ ಕಿರಣ ಪರೀಕ್ಷೆ ನಡೆಸಿ ಅವುಗಳಲ್ಲಿ ಕ್ಷಯ ರೋಗದ ಲಕ್ಷಣ ಕಂಡುಬಂದರೆ ರೋಗಗಳ ಕಫದ ಮಾದರಿ ಪುನಃ ಸಂಗ್ರಹಿಸಿ ಕಫದ ಮಾದರಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿರುವ ಸಿ.ಬಿ. ನ್ಯಾಟ್ ಕೇಂದ್ರಕ್ಕೆ ಕಳುಹಿಸಿ ಕ್ಷಯರೋಗದ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ. ಈ ಸಿ.ಬಿ ನ್ಯಾಟ್ ಯಂತ್ರದಲ್ಲಿ ಕ್ಷಯ ರೋಗ ದೃಢಪಟ್ಟಲ್ಲಿ ಕ್ಷಯ ರೋಗದ ಚಿಕಿತ್ಸೆ ಪ್ರಾರಂಭಿಸಲಾಗುವದು.
ಸಾರ್ವಜನಿಕರು ಆಂದೋಲನದ ಅವಧಿಯಲ್ಲಿ ಆರೋಗ್ಯ ಕಾರ್ಯಕರ್ತರ ತಂಡ ಮನೆಗಳಿಗೆ ಭೇಟಿ ನೀಡುವ ಸಂದರ್ಭ ತಮ್ಮ ಮನೆಯಲ್ಲಿರುವ ಕುಟುಂಬದ ಸದಸ್ಯರ ಸಂಪೂರ್ಣ ಮಾಹಿತಿ ಹಾಗೂ ಕ್ಷಯ ರೋಗದ ಲಕ್ಷಣಗಳಿದ್ದಲ್ಲಿ ಅವರ ಮಾಹಿತಿಯನ್ನು ಆರೋಗ್ಯ ಕಾರ್ಯಕರ್ತರ ತಂಡಗಳಿಗೆ ನೀಡಿ ಸಕ್ರೀಯ ಕ್ಷಯ ರೋಗದ ಪತ್ತೆ ಆಂದೋಲನ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿ ಸಹಕರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಕೋರಿದ್ದಾರೆ.