ಒಡೆಯನಪುರ, ನ. 22 : ಮನುಷ್ಯನ ಶರೀರದ ಪ್ರಮುಖ ಭಾಗವಾದ ಹೃದಯ, ಕಿಡ್ನಿ, ಕಣ್ಣು ಮುಂತಾದ ಭಾಗಗಳಂತೆ ನ್ಯೂರಾನ್ ಸಹ ಒಂದಾಗಿದ್ದು 2010ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆಯ ಆಧಾರದಲ್ಲಿ ವೈಜ್ಞಾನಿಕ ಹಿನ್ನೆಲೆ ಹಾಗೂ ಸಸ್ಪೆನ್ಸ್, ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಶನಿವಾರಸಂತೆ ಸಮಿಪದ ಸಂಪಿಗೆದಾಳು ಗ್ರಾಮದ ನಿವಾಸಿ ವಿಕಾಸ್ ಪುಷ್ಪಗಿರಿ ಅವರ ನಿರ್ದೇಶನದಲ್ಲಿ ಮೂಡಿಬಂದ ‘ನ್ಯೂರಾನ್’ ಚಲನಚಿತ್ರ ಶುಕ್ರವಾರ ರಾಜ್ಯದ 80 ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಶನಿವಾರಸಂತೆಯ ಯಶಸ್ವಿ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿದೆ. ಶನಿವಾರಸಂತೆ ಸಮೀಪದ ಸಂಪಿಗೆದಾಳು ಗ್ರಾಮದ ಕಾಫಿ ಬೆಳೆಗಾರ ಎಚ್.ಟಿ. ವಸಂತ್‍ಕುಮಾರ್, ಹೇಮಾವತಿ ದಂಪತಿ ಪುತ್ರ ವಿಕಾಸ್ ಪುಷ್ಪಗಿರಿ ಅವರು ಕಳೆದ 10 ವರ್ಷಗಳಿಂದ ಸಿನಿಮಾಕ್ಷೇತ್ರದಲ್ಲಿ ತೊಡಗಿಸಿಕೊಂಡು ನಿಶಬ್ಧ-2 ಚಿತ್ರ ಸೇರಿದಂತೆ ಹಲವಾರು ಸಿನಿಮಾ ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಅನುಭವ ಹೊಂದಿದ್ದು, ಈಗ ಸ್ವತಂತ್ರ ನಿರ್ದೇಶಕನಾಗಿ ‘ನ್ಯೂರಾನ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಚಿತ್ರದ ಕಥೆಯೂ ವಿಕಾಸ್ ಅವರದಾಗಿದೆ. ವಿ.ಆರ್. ವಿನಯ್ ಕುಮಾರ್ ನಿರ್ಮಾಪಕರಾಗಿರುವ ಚಿತ್ರದಲ್ಲಿ ಯುವ ಎಂಬವರು ಸಿನಿಮಾದ ನಾಯಕ ನಟನಾಗಿದ್ದು, ಶಿಲ್ಪಾಶೆಟ್ಟಿ, ವೈಷ್ಣವಿ ನಾಯಕಿಯರಾಗಿದ್ದಾರೆ. ಚಿತ್ರದಲ್ಲಿ ಜೈಜಗದೀಶ್, ಅರವಿಂದ್ ಮುಂತಾದವರು ನಟಿಸಿದ್ದಾರೆ.

ಯಶಸ್ವಿ ಚಿತ್ರಮಂದಿರ ಒಳಭಾಗದಲ್ಲಿ ನಡೆದ ಪುಟ್ಟ ಸಮಾರಂಭದಲ್ಲಿ ಚಿತ್ರ ನಿರ್ದೇಶಕ ವಿಕಾಸ್ ಪುಷ್ಪಗಿರಿ ಅವರ ತಂದೆ ವಸಂತ್‍ಕುಮಾರ್, ತಾಯಿ ಹೇಮಾವತಿ, ತಾತ ಎಚ್.ಎನ್. ತಮ್ಮಯ್ಯ ಕುಟುಂಬ ವರ್ಗ ಕೇಕ್ ಕತ್ತರಿಸಿ ಚಿತ್ರದ ಯಶಸ್ಸಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಚಿತ್ರ ಮಂದಿರದ ಮುಂಭಾಗದಲ್ಲಿ ಗ್ರಾಮಸ್ಥರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು.

-ವಿ.ಸಿ.ಸುರೇಶ್ ಒಡೆಯನಪುರ