ಗೋಣಿಕೊಪ್ಪಲು, ನ.22: ಹಿರಿಯ ಅರಣ್ಯ ಅಧಿಕಾರಿಗಳು ಸೇರಿದಂತೆ ನಾಲ್ಕು ಅಧಿಕಾರಿಗಳ ಮೇಲೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಕಾರ್ಯದರ್ಶಿಯವರು ಕುಟ್ಟ ಪೊಲೀಸ್ ಠಾಣೆಯಲ್ಲಿ ಪುಕಾರು ಸಲ್ಲಿಸಿ ಕೂಡಲೇ ಎಫ್‍ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಗುರುವಾರ ಮಧ್ಯಾಹ್ನದ ವೇಳೆ ಕುಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಿಶಾನ್ ಕುಶಾಲಪ್ಪ ಅವರ ಕಾಫಿ ತೋಟದಲ್ಲಿ ಕಾರ್ಮಿಕನಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಕರಿಯ ಎಂಬಾತನನ್ನು ಕಾಡಾನೆಯು ಬಲಿ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ರೈತರು ತಡ ರಾತ್ರಿವರೆಗೂ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಅರಣ್ಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಶುಕ್ರವಾರ ಮುಂಜಾನೆಯಿಂದಲೇ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಜಮಾಯಿಸಿದ ನೂರಾರು ರೈತರು ಅರಣ್ಯ ಅಧಿಕಾರಿಗಳ ಕಾರ್ಯವೈಖರಿ, ಬೇಜಾವಬ್ದಾರಿತನದಿಂದ ಇಂತಹ ಘಟನೆಗಳು ಮರುಕಳುಹಿಸುತ್ತಿವೆ ಎಂದು ಆರೋಪಿಸಿ ಕುಟ್ಟ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು. ಪೊಲೀಸರು ಅರಣ್ಯ ಅಧಿಕಾರಿಗಳ ಮೇಲೆ ರೈತ ಸಂಘ ನೀಡಿರುವ ದೂರನ್ನು ಸ್ವೀಕರಿಸಿ ಕ್ರಮ ಕೈಗೊಳ್ಳಬೇಕು. ಹಾಗೂ ಮೃತಪಟ್ಟ ಕರಿಯನ ಕುಟುಂಬಕ್ಕೆ ಸ್ಥಳದಲ್ಲಿಯೇ ರೂ. 5 ಲಕ್ಷ ಚೆಕ್ ನೀಡುವಂತೆ ಅಗ್ರಹಿಸಿ ಪ್ರತಿಭಟಿಸಿದರು.
ಡಿವೈಎಸ್ಪಿ ಜಯಕುಮಾರ್ ರೈತ ಮುಖಂಡರ ಮನವೊಲಿಸಿ ಪ್ರತಿಭಟನೆ ಕೈಬಿಡಬೇಕೆಂದು ಮನವಿ ಮಾಡಿದ ರಾದರೂ ಹೋರಾಟಗಾರರು ತಕ್ಷಣವೇ ಪರಿಹಾರ ನೀಡದೆ; ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೆ ಪ್ರತಿಭಟನೆ ಹಿಂಪಡೆಯಲು ಸಾಧ್ಯವಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದರು.
ರೈತರ ಹೋರಾಟಕ್ಕೆ ಮಣಿದ ಡಿವೈಎಸ್ಪಿ ಪ್ರತಿಭಟನಾ ಸ್ಥಳಕ್ಕೆ ಹುಣಸೂರು ವನ್ಯಜೀವಿ ವಿಭಾಗದ ಡಿಎಫ್‍ಒ ಕ್ರಿಸ್ತರಾಜ್, ಸಹಾಯಕ ಸಂರಕ್ಷಣಾಧಿಕಾರಿ ಪ್ರಸನ್ನಕುಮಾರ್ ಸೇರಿದಂತೆ ಇನ್ನಿತರ ಅರಣ್ಯ ಅಧಿಕಾರಿಗಳನ್ನು ಕರೆಸುವಲ್ಲಿ ಯಶಸ್ವಿಯಾದರು. ಅಧಿಕಾರಿಗಳು ಆಗಮಿಸುತ್ತಿದ್ದಂತೆಯೇ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಹುಣಸೂರು ವನ್ಯಜೀವಿ ವಿಭಾಗದ ಡಿಎಫ್‍ಒ ಕ್ರಿಸ್ತರಾಜ್ ಸ್ಥಳದಲ್ಲಿಯೇ 5 ಲಕ್ಷ ಪರಿಹಾರದ ಚೆಕ್ ವಿತರಿಸಿದರು.
ಹೋರಾಟ ಬಿಸಿ ಏರುತ್ತಿದ್ದಂತೆಯೇ ಪ್ರತಿಭಟನಾ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ವಿವಿಧ ಗ್ರಾಮಗಳಿಂದ ಆಗಮಿಸುತ್ತಿದ್ದರು. ಪೊಲೀಸರಿಗೆ ರೈತರ ಪ್ರತಿಭಟನೆಯನ್ನು ಹತೋಟಿಗೆ ತರಲು ಕಷ್ಟವಾಯಿತು. ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದ ಹುಣಸೂರು ವನ್ಯಜೀವಿ ವಿಭಾಗದ ಡಿಎಫ್‍ಒ ಕ್ರಿಸ್ತರಾಜ್ 15 ದಿನದ ಒಳಗೆ ರೈತ ಮುಖಂಡ ರೊಂದಿಗೆ ಹಿರಿಯ ಅರಣ್ಯ ಅಧಿಕಾರಿಗಳ ಸಭೆ ಕರೆಯುತ್ತೇವೆ. ಕೂಡಲೇ ಈ ಭಾಗದ ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವ 6 ಕಾಡಾನೆಗಳನ್ನು ಓಡಿಸುವ ಬಗ್ಗೆ ಭರವಸೆ ನೀಡಿದರು. ಅಧಿಕಾರಿಗಳ ಭರವಸೆ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ,ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಟಿ.ಶೆಟ್ಟಿಗೇರಿ ರೈತ ಮುಖಂಡರಾದ ಅಪ್ಪಚಂಗಡ ಮೋಟಯ್ಯ, ಸಿದ್ದಾಪುರ ವಕೀಲರಾದ ಹೇಮಚಂದ್ರ, ಬಿರುನಾಣಿ ರೈತ ಮುಖಂಡರಾದ ಕರ್ತಮಾಡ ಸುಜು ಪೊನ್ನಪ್ಪ, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆಮಾಡ ಮಂಜುನಾಥ್,ತಾಲೂಕು ಸಂಚಾಲಕ ಬಾಚಮಾಡ ಭವಿಕುಮಾರ್, ಶ್ರೀಮಂಗಲ ಹೋಬಳಿ ಸಂಚಾಲಕ ಚಟ್ಟಂಗಡ ಕಂಬ ಕಾರ್ಯಪ್ಪ, ಹುದಿಕೇರಿ ಹೋಬಳಿ ಸಂಚಾಲಕ ಚಂಗುಲಂಡ ಸೂರಜ್,ರೈತ ಮುಖಂಡರುಗಳಾದ ಅಜ್ಜಮಾಡ ಮಹೇಶ್,ಅಜ್ಜಮಾಡ ಮೋಹನ್, ಅಜ್ಜಮಾಡ ನವೀನ್, ಅಜ್ಜಮಾಡ ಸಿದ್ದು, ಕುಟ್ಟ ಭಾಗದ ಮುಖಂಡರುಗಳಾದ ಕಳ್ಳಿಚಂಡ ಪ್ರಥ್ವಿ,ಕೈಬುಲಿರ ನಂಜಪ್ಪ,ಮಚ್ಚಮಾಡ ನವೀನ್,ಕೊಂಗೆರ ಗಪ್ಪು, ತೀತರಮಾಡ ರಾಜ, ಸದಸ್ಯರು ಸೇರಿದಂತೆ ಕುಟ್ಟ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮುಕ್ಕಾಟೀರ ಶಿವು ಮಾದಪ್ಪ, ತಾಲೂಕು ಪಂಚಾಯ್ತಿ ಸದಸ್ಯರಾದ ಪಲ್ವಿನ್ ಪೂಣಚ್ಚ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ, ಟಿ ಶೆಟ್ಟಿಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಚ್ಚಮಾಡ ಸುಮಂತ್,ರೈತ ಸಂಘದ ನಂಜುಂಡಸ್ವಾಮಿ ಬಣದ ಅಧ್ಯಕ್ಷ ಚಿಮ್ಮಂಗಡ ಗಣೇಶ್,ಕಾರ್ಯದರ್ಶಿ ಕಳ್ಳಿಚಂಡ ಧನು ಸೇರಿದಂತೆ ಇನ್ನಿತರರು ಹಾಜರಿದ್ದರು.
ಡಿವೈಎಸ್ಪಿ ಜಯಕುಮಾರ್ ಮುಂದಾಳತ್ವದಲ್ಲಿ ಕುಟ್ಟ, ಶ್ರೀಮಂಗಲ,ಪೊನ್ನಂಪೇಟೆ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.ರೈತರ ಪ್ರತಿಭಟನೆಯಿಂದ ಕೆಲ ಕಾಲ ಅಂತರ ರಾಜ್ಯ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.
-ಚಿತ್ರ, ವರದಿ: ಹೆಚ್.ಕೆ.ಜಗದೀಶ್