ಮಡಿಕೇರಿ, ನ. 22: ಮರಗೋಡುವಿನ ವಿವೇಕಾನಂದ ಯುವಕ ಸಂಘದ ವತಿಯಿಂದ ಸ್ಥಳೀಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗ್ರಾಮಾಂತರ ಆಟೋಟ ಸ್ಪರ್ಧೆಯನ್ನು ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಪೊಲೀಸ್ ಕರ್ಣಯ್ಯನ ಬಸಪ್ಪ ತೆಂಗಿನ ಕಾಯಿಗೆ ಗುಂಡು ಹೊಡೆಯುವದರ ಮೂಲಕ ಉದ್ಘಾಟಿಸಿದರು. ಇಂತಹ ಕ್ರೀಡಾಕೂಟಗಳನ್ನು ನಡೆಸುವದರಿಂದ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಂತಾಗುತ್ತಿದೆ ಎಂದು ಅವರು ಹೇಳಿದರು. ಮುಖ್ಯ ಅತಿಥಿಗಳಾಗಿ ಹೊಸ್ಕೇರಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಡುವಂಡ್ರ ಕವಿತ, ಮರಗೋಡು ಗ್ರಾಮ ಪಂಚಾಯಿತಿ ಸದಸ್ಯರಾದ ಪರಿಚನ ಹರೀಶ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಡುವಂಡ್ರ ಲಕ್ಷ್ಮೀಪತಿ ವಹಿಸಿದ್ದರು.

ಕಾನಡ್ಕ ಪವನ್ ಪ್ರಾರ್ಥಿಸಿ, ಮಗೇರನ ಬೆಳ್ಯಪ್ಪ ಸ್ವಾಗತಿಸಿದರೆ, ಮಾಳಿಗೆಮನೆ ವೆಂಕಟೇಶ್ ನಿರೂಪಿಸಿ, ಕಾರ್ಯದರ್ಶಿ ಕಾನಡ್ಕ ಹರೀಶ್ ವಂದಿಸಿದರು.

ಸಮಾರೋಪ

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಬೋಧ ಸ್ವರೂಪಾನಂದ ಜಿ. ಅವರು ವಿವೇಕಾನಂದರ ತತ್ವ ಆದರ್ಶಗಳ ಬಗ್ಗೆ ಸುದೀರ್ಘವಾಗಿ ಉಪನ್ಯಾಸ ನೀಡಿದರು. ಇಂದಿನ ಯುವ ಜನತೆ ವಿವೇಕಾನಂದರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಉತ್ತಮ ಸಮಾಜವನ್ನು ರೂಪಿಸಲು ಸಾಧ್ಯ ಹಾಗೂ ಯುವ ಜನತೆ ಯಾವದೇ ದುಶ್ಚಟಗಳಿಗೆ ಬಲಿಯಾಗದೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳ ಬೇಕೆಂದು ಕಿವಿಮಾತು ಹೇಳಿದರು.

ಮರಗೋಡಿನ ಭಾರತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಟಿ. ಶಾಜಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಯುವಕ ಸಂಘವು ಸ್ಥಾಪನೆಯಾಗಿ 50 ವರ್ಷಗಳನ್ನು ಪೂರೈಸಿರುವದು ಹೆಮ್ಮೆಯ ವಿಷಯ ಎಂದರು.

ಮುಖ್ಯ ಅತಿಥಿಗಳಾಗಿ ಕಾಫಿ ಬೆಳೆಗಾರ ಇಟ್ಟಣಿಕೆ ರಾಮಕೃಷ್ಣ, ಮರಗೋಡು ಗ್ರಾಮ ಪಂಚಾಯಿತಿ ಸದಸ್ಯ ಕಟ್ಟೆಮನೆ ಧನಂಜಯ, ಮೋಬಿಯಸ್ ಪೌಂಡೇಶನ್ ಪ್ರೋಜೆಕ್ಟ್ ಕೊಆರ್‍ಡಿನೇಟರ್ ಎಂ.ಬಿ. ಬೋಪಣ್ಣ, ಕಾಫಿ ಬೆಳೆಗಾರ ಬಿದ್ರುಪಣೆ ನವೀನ್, ಮೋಬಿಯಸ್ ಫೌಂಡೇಶನ್ ಕರ್ನಲ್ ಸಂತೋಷ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರಗೋಡಿನ ಸ.ಮಾ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯಿನಿ ಕೆದಂಬಾಡಿ ಚಂದ್ರಕಲಾ ವಹಿಸಿದ್ದರು.

ಯುವಕ ಸಂಘದಲ್ಲಿ ಕಳೆದ 50 ವರ್ಷಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದಂತಹ ಹಿರಿಯರಾದ ಕೋಚನ ದಾಮೋದರ, ದೇವಜನ ನಾಣಯ್ಯ, ಕರ್ಣಯ್ಯನ ಮೋಟಯ್ಯ, ಮಳ್ಳಂದೀರ ಶೇಷಗಿರಿ, ತಾತಪಂಡ ಉತ್ತಪ್ಪ, ಕರ್ಣಯ್ಯನ ಜಯಾನಂದ, ಮಾಳಿಗೆಮನೆ ವೆಂಟಕೇಶ್ ಇವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಕ್ರೀಡಾಕೂಟದಲ್ಲಿ 30 ವಿವಿಧ ಬಗೆಯ ವಿವಿಧ ವಯೋಮಾನದವರಿಗೆ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತ ರಾದಂತಹ ಸ್ಪರ್ಧಿಗಳಿಗೆ ಸಂಘದ ವತಿಯಿಂದ ಬಹುಮಾನಗಳನ್ನು ನೀಡಲಾಯಿತು. ಕ್ರೀಡಾಕೂಟದಲ್ಲಿ ನೂರಾರು ಸಂಖ್ಯೆಯಲ್ಲಿ ಕ್ರೀಡಾಭಿಮಾನಿ ಗಳು, ಕ್ರೀಡಾಪಟುಗಳು, ಗ್ರಾಮಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಮಗೇರನ ಬೆಳ್ಯಪ್ಪ ಸ್ವಾಗತಿಸಿ, ಮಾಳಿಗೆಮನೆ ವೆಂಕಟೇಶ್ ನಿರೂಪಿಸಿ, ಕಾರ್ಯದರ್ಶಿ ಕಾನಡ್ಕ ಹನೀಶ್ ವಂದಿಸಿದರು.