ಸಿದ್ದಾಪುರ, ನ.22 : ಮಾಲಿನ್ಯ ತಡೆಗಟ್ಟಿ ಪರಿಸರ ಉಳಿಸಿ ಎಂಬ ಸಂದೇಶದೊಂದಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಸೈಕಲ್ ಯಾತ್ರೆ ಕೈಗೊಂಡಿರುವ ಯುವಕರ ತಂಡ ಮೂರು ಸೈಕಲ್ನೊಂದಿಗೆ ಕೇರಳ ರಾಜ್ಯದ ಕೋಯಿಕೋಡು ಜಿಲ್ಲೆ ಯಿಂದ ಕೊಡಗಿಗೆ ಭೇಟಿ ನೀಡಿ ಗ್ರಾಮೀಣ ಪ್ರದೇಶಗಳಲ್ಲಿರುವ ಸಾರ್ವಜನಿಕರು ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸಿ ಗಮನ ಸೆಳೆದಿದ್ದಾರೆ. ಕೋಯಿಕೋಡ್ ಜಿಲ್ಲೆಯ ಸವಾದ್, ಶ್ರೀರಾಗ್, ಜುಬೇರ್ ಎಂಬ ಮೂವರು ವಿದ್ಯಾರ್ಥಿಗಳು ಕಲಿಕೆಯ ಬಿಡುವಿನ ವೇಳೆ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡು ವಾಹನಗಳ ಮಾಲಿನ್ಯದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪರಿಸರ ಉಳಿಸಿ ಎಂಬ ಸಂದೇಶವನ್ನು ಕಳೆದ ಎರಡು ವರ್ಷಗಳಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಸೈಕಲ್ ಜಾಥಾ ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಸೈಕಲ್ ಯಾತ್ರೆಯ ಪ್ರಮುಖ ಶ್ರೀರಾಗ್ ಪತ್ರಿಕೆಗೆ ತಿಳಿಸಿದ್ದಾರೆ ಪ್ರಕೃತಿ ಸೌಂದರ್ಯದಿಂದ ಕೂಡಿರುವ ಕೊಡಗು ಜಿಲ್ಲೆಗೂ ಭೇಟಿ ನೀಡಬೇಕೆನ್ನುವ ಉದ್ದೇಶದಿಂದ ಸುಮಾರು ಐನೂರು ಕಿಲೋಮೀಟರ್ ಯಾತ್ರೆಯನ್ನು ಕೈಗೊಂಡಿದ್ದು ರಸ್ತೆ ಬದಿಯ ಗ್ರಾಮಗಳಲ್ಲಿ ಕಾಣಸಿಗುವ ಜನರಿಗೆ ಪರಿಸರ ಜಾಗೃತಿಯ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ಅಧಿಕವಾಗುತ್ತಿದ್ದು ಇದರಿಂದ ಆರೋಗ್ಯದ ಮೇಲೂ ಏರುಪೇರು ಉಂಟಾಗುತ್ತಿದೆ. ಪ್ರತಿಯೊಬ್ಬರೂ ಸೈಕಲ್ ಕಲಿಕೆಯನ್ನು ಮಾಡಿದ್ದಲ್ಲಿ ಆರೋಗ್ಯವು ಉತ್ತಮ ಆಗುವದಲ್ಲದೆ ಯಾವದೇ ಖರ್ಚು ವೆಚ್ಚಗಳಿಲ್ಲದೆ ಮಾಲಿನ್ಯ ತಡೆಗಟ್ಟಲು ಸಾಧ್ಯವಾಗುತ್ತದೆ.
ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚಾಗಿ ಸೈಕಲ್ ಬಳಕೆಗೆ ಅವಕಾಶ ಕಲ್ಪಿಸಬೇಕು; ಪ್ರತಿಯೊಬ್ಬರೂ ದಿನನಿತ್ಯ ಕೆಲ ಗಂಟೆಗಳ ಕಾಲ ಸೈಕಲ್ ಬಳಕೆ ಮಾಡಿದ್ದಲ್ಲಿ ಆರೋಗ್ಯದಲ್ಲೂ ಸುಧಾರಣೆ ಕಾಣಬಹುದಾಗಿದೆ.ಹೆಚ್ಚು ಗಿಡ ಮರಗಳನ್ನು ಬೆಳೆಸಿ ಉತ್ತಮ ಪರಿಸರ ನಿರ್ಮಾಣ ಮಾಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಕೈಜೋಡಿಸಬೇಕೆಂದರು.
ಜಾಗೃತಿಗಾಗಿ ಸೈಕಲ್ ಯಾತ್ರೆ ಕೈಗೊಂಡಿರುವ ವಿದ್ಯಾರ್ಥಿಗಳಿಗೆ ಸಿದ್ದಾಪುರದ ವಿದ್ಯಾರ್ಥಿಗಳು ಶುಭ ಹಾರೈಸಿದರು.