ಮಡಿಕೇರಿ, ನ. 23: ಅಪರಾಧ ಸೇರಿದಂತೆ ಹಲವು ಪ್ರಕರಣಗಳ ಸಂಬಂಧ ಪೊಲೀಸರು ತನಿಖೆ ಸಂದರ್ಭದಲ್ಲಿ ವಿದ್ಯುನ್ಮಾನ ಸಾಕ್ಷಿಗಳನ್ನು ಸಂಗ್ರಹಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದಲ್ಲಿ ನೊಂದವರಿಗೆ ನ್ಯಾಯ ಒದಗಿಸಲು ಸಾಧ್ಯ. ಆ ನಿಟ್ಟಿನಲ್ಲಿ ತನಿಖೆಯನ್ನು ಸಮರ್ಪಕವಾಗಿ ನಿರ್ವಹಿಸಿ ಸಾಕ್ಷಿ ಒದಗಿಸಬೇಕು ಎಂದು ಹೈಕೋರ್ಟ್ ನ್ಯಾಯಾಧೀಶರಾದ ಎಸ್.ಎನ್. ಸತ್ಯನಾರಾಯಣ ಹೇಳಿದರು. ಕರ್ನಾಟಕ ನ್ಯಾಯಾಂಗ ಅಕಾಡೆಮಿ ಮತ್ತು ಜಿಲ್ಲಾ ನ್ಯಾಯಾಂಗ ಇಲಾಖೆ ವತಿಯಿಂದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಸಹಕಾರದಲ್ಲಿ ನ್ಯಾಯಾಂಗ ಅಧಿಕಾರಿಗಳು, ಪೊಲೀಸ್ ಅಧಿಕಾರಿ ಗಳು, ಸರ್ಕಾರಿ ಅಭಿಯೋಜಕರು ಮತ್ತು ಜಿಲ್ಲಾ ನ್ಯಾಯಾಂಗ ಅಧಿಕಾರಿಗಳಿಗಾಗಿ ಜಿ.ಪಂ.ನೂತನ ಭವನದಲ್ಲಿ ಶನಿವಾರ ‘ವಿದ್ಯುನ್ಮಾನ ಸಾಕ್ಷಿ’ ಕುರಿತು ನಡೆದ ಕಾನೂನು ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನೊಂದವರಿಗೆ ನ್ಯಾಯ ಒದಗಿಸಲು ನಿಖರ ಸಾಕ್ಷಿ ಒದಗಿಸ ಬೇಕು. ಆ ನಿಟ್ಟಿನಲ್ಲಿ ತನಿಖೆ ಸಂದರ್ಭ ದಲ್ಲಿ ಸಂಪೂರ್ಣ ಮನಸ್ಸಿಟ್ಟು ವಿಚಾರಣೆ ಮಾಡಿ ಸಾಕ್ಷಿ ಒದಗಿಸ ಬೇಕು.
(ಮೊದಲ ಪುಟದಿಂದ) ಜೊತೆಗೆ ವಿವಿಧ ಹಂತದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಸಹ ಕಡತಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ನ್ಯಾಯಾಧೀಶರು ಸಲಹೆಯಿತ್ತರು.
ಇಡೀ ವಿಶ್ವವೇ ಒಂದು ಹಳ್ಳಿಯಾಗಿದ್ದು, ತಂತ್ರಜ್ಞಾನ ಬಳಸಿ ಕೊಂಡು ಸಾಕ್ಷಿಯನ್ನು ಕ್ಷಣಾರ್ಧದಲ್ಲಿ ಪತ್ತೆ ಹಚ್ಚಬಹುದಾಗಿದೆ. ಆ ದಿಸೆಯಲ್ಲಿ ತನಿಖೆ ಸಂದರ್ಭದಲ್ಲಿ ವಿದ್ಯುನ್ಮಾನ ಸಾಕ್ಷಿಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.
ಯಾವದೇ ಪ್ರಕರಣಗಳ ತನಿಖೆ ಸಂದರ್ಭದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ವಿಭಿನ್ನ ದೃಷ್ಟಿಕೋನಗಳ ಮೂಲಕ ತನಿಖೆ ನಡೆಸಿ ಸಾಕ್ಷಿ ಒದಗಿಸಬೇಕು ಎಂದು ಹೈಕೋರ್ಟ್ ನ್ಯಾಯಾಧೀಶರು ನುಡಿದರು.
ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಕೆ. ನಟರಾಜನ್ ಮಾತನಾಡಿ, ಕ್ರಿಮಿನಲ್ ಪ್ರಕರಣಗಳಲ್ಲಿ ಬಲವಾದ ಸಾಕ್ಷಿ ಇದ್ದಾಗ ಮಾತ್ರ ನ್ಯಾಯ ಒದಗಿಸಲು ಸಾಧ್ಯ. ಆದ್ದರಿಂದ ತನಿಖೆ ಸಂದರ್ಭದಲ್ಲಿ ವಿದ್ಯುನ್ಮಾನ ಸಾಕ್ಷಿ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಹೈಕೋರ್ಟ್ ನ್ಯಾಯಾಧೀಶರಾದ ಸಚಿನ್ ಶಂಕರ್ ಮಗದಂ ಮಾತನಾಡಿ, ಅಪರಾಧ ಪ್ರಕರಣಗಳ ತನಿಖೆ ಸಂದರ್ಭದಲ್ಲಿ ಬಲವಾದ ಸಾಕ್ಷಿಯನ್ನು ನ್ಯಾಯಾಲಯಕ್ಕೆ ಒದಗಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ವಿದ್ಯುನ್ಮಾನ ಸಾಕ್ಷಿಗಳು ಅತ್ಯಮೂಲ್ಯವಾಗಿದೆ. ಆ ನಿಟ್ಟಿನಲ್ಲಿ ಪೊಲೀಸರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ನಿವೃತ್ತ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಎಸ್.ಆರ್. ಸೋಮಶೇಖರ, ಸೈಬರ್ ಕ್ರೈಮ್ ಪೊಲೀಸ್ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಯಶವಂತ ಕುಮಾರ್, ವಿಶೇಷ ಸರ್ಕಾರಿ ಅಭಿಯೋಜಕರಾದ ಮಧುಕರ್ ದೇಶಪಾಂಡೆ, ಡಾ. ಎಂ.ಎಸ್. ರಾಮಯ್ಯ ಕಾಲೇಜಿನ ತಾಂತ್ರಿಕ ವಿಜ್ಞಾನ ಸಂಸ್ಥೆಯ ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮನಿಶ್ ಕುಮಾರ್ ಇತರರು ಇದ್ದರು.
ಸೈಬರ್ ಕ್ರೈಂ ಮತ್ತು ಡಿಜಿಟಲ್ ವಿಧಿವಿಜ್ಞಾನ ಹಾಗೂ ವಿದ್ಯುನ್ಮಾನ ಸಾಕ್ಷಿ ಸಂರಕ್ಷಣೆ ಮತ್ತು ಸಂಗ್ರಹಣೆ, ಇತರ ವಿಚಾರಗಳ ಕುರಿತು ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದಲ್ಲಿ ಡಿವೈಎಸ್ಪಿ ಗಳಾದ ದಿನೇಶ್ ಕುಮಾರ್, ಜಯಕುಮಾರ್, ಮುರಳೀಧರ, ದಿವಾಕರ, ವಕೀಲರ ಸಂಘದ ಅಧ್ಯಕ್ಷ ಕವನ್, ನ್ಯಾಯಾಲಯ, ಪೊಲೀಸ್ ಇಲಾಖೆ, ಅಬಕಾರಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ವಿ.ವಿ.ಮಲ್ಲಾಪುರ ಅವರು ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ನಿರೂಪಿಸಿದರು. ನ್ಯಾಯಾಧೀಶರಾದ ಭೃಂಗೇಶ್ ಅವರು ವಂದಿಸಿದರು.