ಶ್ರೀಮಂಗಲ, ನ. 23: ತಾ. 21ರಂದು ದ.ಕೊಡಗಿನ ಕುಟ್ಟ ಗ್ರಾಮದಲ್ಲಿ ಹಾಡಹಗಲೇ ತೋಟ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿ ತುಳಿದು ಕೊಂದ ಬೆನ್ನಲ್ಲೇ ಇದೀಗ ಅರಣ್ಯ ಇಲಾಖೆ ಸಾಕಾನೆಗಳ ಸಹಾಯದೊಂದಿಗೆ ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಕೂಂಬಿಂಗ್ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದೆ.
ಈ ನಿಟ್ಟಿನಲ್ಲಿ ಶನಿವಾರ ಕುಟ್ಟ ವ್ಯಾಪ್ತಿಯಲ್ಲಿ ಸಿದ್ಧತೆ ನಡೆಸಿದ್ದು ಗ್ರಾಮದಲ್ಲಿ ಕೂಂಬಿಂಗ್ ನಡೆಸಿತು. ಈ ಹಿನ್ನೆಲೆಯಲ್ಲಿ ತಾ. 24 ರಂದು (ಇಂದು) ಮತ್ತು 25 ರಂದು (ನಾಳೆ) ಸಾಕಾನೆ ಸಹಿತ ಕೂಂಬಿಂಗ್ ನಡೆಯಲಿದೆ.
ಈಗಾಗಲೇ ಮತ್ತಿಗೋಡು ಸಾಕಾನೆ ಶಿಬಿರದಿಂದ ಅಭಿಮನ್ಯು ಹಾಗೂ ಗೋಪಾಲಸ್ವಾಮಿ ಎಂಬ ಸಾಕಾನೆಗಳನ್ನು ಕುಟ್ಟಕ್ಕೆ ಕರೆತಂದಿದ್ದು, ಶನಿವಾರ ಗ್ರಾಮದ ಸರಹದ್ದು ವ್ಯಾಪ್ತಿಯಲ್ಲಿ ಕಾಡಾನೆಗಳ ಇರುವಿಕೆಯ ಬಗ್ಗೆ ಶೋಧ ನಡೆಸಿದವು. ತಾ. 24 ಮತ್ತು 25 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶ್ರೀಮಂಗಲ ಮತ್ತು ಕುಟ್ಟ ಗ್ರಾ.ಪಂ ವ್ಯಾಪ್ತಿಯ ಮಂಚಳ್ಳಿ, ಕುಟ್ಟ, ತೈಲ, ಕಾಯಿಮಾನಿ ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆಯಲಿದೆ.
ಕಾರ್ಯಾಚರಣೆಯಲ್ಲಿ ನಾಗರಹೊಳೆ, ಪೊನ್ನಂಪೇಟೆ ಮತ್ತು ಶ್ರೀಮಂಗಲ ಅರಣ್ಯ ವಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದು, ಕಾಡಾನೆಯನ್ನು ಗುರುತಿಸಲು ಕಾರ್ಯಚರಣೆ ನಡೆಸಲಾಗುತ್ತಿದೆ. ಈ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆ ಹಿಂಡುಗಳನ್ನು ಅರಣ್ಯಕ್ಕೆ ಸೇರಿಸಲು ಮುಂದಾಗಿದ್ದು, ಇದೇ ವೇಳೆ ಒಂಟಿ ಸಲಗವನ್ನು ಪತ್ತೆ ಹಚ್ಚಿ ಅದನ್ನು ಬೇರೆ ಸ್ಥಳಕ್ಕೆ ಅಥವಾ ಖೆಡ್ಡಕ್ಕೆ ಹಾಕಲು ಅಗತ್ಯವಾದರೆ ಯೋಜನೆ ರೂಪಿಸುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಕಾರ್ಯಾಚರಣೆಗೆ 2 ಸಾಕಾ&divound; Éಗಳೊಂದಿಗೆ ನಾಲ್ಕು ಕಾವಾಡಿಗರು ಸೇರಿದಂತೆ 50ಕ್ಕೂ ಅಧಿಕ ಸಿಬ್ಬಂದಿ ಗಳು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಮಂಗಲ ವಲಯ ಅರಣ್ಯ ಅಧಿಕಾರಿ ವಿರೇಂದ್ರ ಮರಿಬಣ್ಣವರ್ ತಿಳಿಸಿದ್ದಾರೆ. ಶನಿವಾರ ಕಾರ್ಯಾ ಚರಣೆ ಸಿದ್ಧತೆಯ ಬಗ್ಗೆ ಮಡಿಕೇರಿ ವನ್ಯಜೀವಿ ವಿಭಾಗದ ಎಸಿಎಫ್ ದಯಾನಂದ್ ಮತ್ತು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅರವಳಿಕೆ ತಜ್ಞ ಡಾ. ಮುಜೀಬ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.