*ಗೋಣಿಕೊಪ್ಪಲು, ನ. 21: ನಮಗೂ ಬದಕಲು ಹಕ್ಕು ಪತ್ರ ಕೊಡಿ ಎಂಬ ತೆರೆಮೆಕಾಡು ಪೈಸಾರಿ ನಿವಾಸಿಗಳ ಕೂಗು ಕಳೆದ 50 ವರ್ಷಗಳಿಂದ ಜನಪ್ರತಿನಿಧಿಗಳ, ಅಧಿಕಾರಿಗಳ ಕಿವಿಗೆ ಬಿದ್ದಂತ್ತಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳ ಬದುಕೇ ಗೋಳಾಗಿದೆ. ಬೇಟೋಳಿ ಗ್ರಾ.ಪಂ. ವ್ಯಾಪ್ತ್ತಿಯ ಆರ್ಜಿ ಗ್ರಾಮದ ತೆರೆಮೆಕಾಡು ಪೈಸಾರಿಯಲ್ಲಿ ಸುಮಾರು 47 ಕುಟುಂಬಗಳು ವಾಸಿಸುತ್ತಿವೆ. 56 ಮನೆಗಳನ್ನು ಹೊಂದಿರುವ ಈ ಪೈಸಾರಿಯಲ್ಲಿ ಯಾರಿಗೂ ಹಕ್ಕು ಪತ್ರ ನೀಡಿಲ್ಲ. ಹೀಗಾಗಿ ಸರ್ಕಾರದಿಂದ ಸಿಗುವ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ಕಳೆದ 39 ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಹೋರಾಟ (ಮೊದಲ ಪುಟದಿಂದ) ನಡೆಸಿದರೂ ಹಕ್ಕು ಪತ್ರ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಬೇಟೋಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರ್ವೆ ನಂ. 315/1ಪಿ1ರಲ್ಲಿ 68 ಎಕರೆ ಜಾಗ ಸರ್ಕಾರದ ಆಸ್ತಿಯಾಗಿದೆ.
ಈ ಜಾಗದಲ್ಲಿ ಸುಮಾರು 1 ಎಕರೆ ಜಾಗದಲ್ಲಿ 47 ಕುಟುಂಬಗಳು ತಲತಲಾಂತರಗಳಿಂದ ವಾಸಿಸುತ್ತಿದ್ದಾರೆ. ಈ ಕಾಲೋನಿಗೆ ಶಾಸಕ ಕೆ.ಜಿ. ಬೋಪಯ್ಯ ಅವರ ವಿಶೇಷ ಕಾಳಜಿಯಿಂದ ಕಾಂಕ್ರಿಟ್ ರಸ್ತೆ ಮತ್ತು ರಾಜೀವ್ ಗಾಂಧಿ ವಿದ್ಯುತ್, ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ. ಆದರೆ ಹಕ್ಕು ಪತ್ರ ಇಲ್ಲದೇ ಇರುವದು ಯಾವದೇ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುಡಿಸಲು ಮತ್ತು ಮಣ್ಣಿನಲ್ಲಿ ಕಟ್ಟಿದ ಮನೆಗಳಲ್ಲಿ ವಾಸಿಸುವ ಸ್ಥಿತಿ ಇವರದ್ದಾಗಿದೆ. ಕನಿಷ್ಟ ಶೌಚಾಲಯಗಳ ಸೌಲಭ್ಯಗಳು ದೊರೆಯುತ್ತಿಲ್ಲ.
ಸುಮಾರು 70-80 ವರ್ಷಗಳಿಂದ ವಾಸಿಸುತ್ತಿರುವ ಇವರನ್ನು ಸ್ಥಳಾಂತರಿಸಲು ಹುನ್ನಾರ ನಡೆಯುತ್ತಿದೆ. ಹೀಗಾಗಿ ಇವರು ವಾಸಿಸುವ ಸ್ಥಳವನ್ನು ಗೋಮಾಳ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಈಗಾಗಲೇ 60 ಎಕರೆ ಜಾಗದಲ್ಲಿ 2005ರಲ್ಲಿ ಪಟ್ಟಣ ಪಂಚಾಯಿತಿಗೆ ಕಸ ವಿಲೇವಾರಿ ಮಾಡಲು 5 ಎಕರೆ ಜಾಗವನ್ನು 2014ರಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 5 ಎಕರೆ ಜಾಗವನ್ನು, 1 ಎಕರೆ ಜಾಗವನ್ನು, ಉಗ್ರಗಾಮಿ ನಿಗ್ರಹ ಪಡೆ ಪೆÇಲೀಸ್ ಕಚೇರಿ ಮತ್ತು ವಸತಿ ಗೃಹಕ್ಕೆ, 50 ಸೆಂಟು ವಾಲ್ಮೀಕಿ ಭವನಕ್ಕೆ ನೀಡಲಾಗಿದೆ. ಮುಸ್ಲಿಂ ಸಮುದಾಯದ ಸ್ಮಶಾನಕ್ಕೂ ಎರಡು ಎಕರೆ ಜಾಗವನ್ನು ಮೀಸಲಿರಿಸಿದೆ. ಅಲ್ಲದೆ ಆರ್ಜಿ ಗ್ರಾಮ ಪಂಚಾಯಿಗೆ 2 ಎಕರೆ ಜಾಗವನ್ನು ಖಾಯ್ದಿರಿಸಲಾಗಿದೆ. ಆದರೆ ಹಲವು ವರ್ಷಗಳಿಂದ ವಾಸಿಸುತ್ತಿರುವ ನಮಗೆ ಹಕ್ಕು ಪತ್ರ ನೀಡುತ್ತಿಲ್ಲ. ಸ್ಮಶಾನಕ್ಕೂ ಜಾಗ ನೀಡುತ್ತಿಲ್ಲ. ನಾವು ವಾಸಿಸುತ್ತಿರುವ ಸ್ಥಳದಿಂದ ನಮ್ಮನ್ನು ಒಕ್ಕಲೆಬ್ಬಿಸುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ನಾವು ಬೆಳೆದ ಕಾಫಿ, ಬಾಳೆ ಫಸಲುಗಳನ್ನು ನಾಶ ಮಾಡುತ್ತಿದ್ದಾರೆ. ನಮ್ಮ ಮೇಲೆ ದೌರ್ಜನ್ಯ ನಡೆಸಿ ಶೋಷಣೆ ಮಾಡುತ್ತಿದ್ದಾರೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸುತ್ತಿದ್ದಾರೆ.