ಗೋಣಿಕೊಪ್ಪಲು..ನ.21:ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಕೆಲವು ಅಂಗಡಿಗಳಿಗೆ ದಿಢೀರ್ ದಾಳಿ ನಡೆಸಿದ ಗೋಣಿಕೊಪ್ಪ ಗ್ರಾಮ ಪಂಚಾಯ್ತಿಯ ಪಿಡಿಒ ಹಾಗೂ ಸಿಬ್ಬಂದಿ ಅಂಗಡಿಯಲ್ಲಿ ಇಟ್ಟಿದ್ದ ಪ್ಲಾಸ್ಟಿಕ್ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ. ಅಲ್ಲದೆ ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ತಳ್ಳುಗಾಡಿ ಯನ್ನು ಎತ್ತಂಗಡಿ ಮಾಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಇತ್ತೀಚೆಗೆ ಪಂಚಾಯ್ತಿಯ ಅನುಮತಿಯಿಲ್ಲದೆ ಮೈಸೂರು, ಹುಣಸೂರು, ಪಿರಿಯಾಪಟ್ಟಣ ಭಾಗದಿಂದ ಆಗಮಿಸುವ ವ್ಯಾಪಾರಿಗಳು ಮುಖ್ಯ ರಸ್ತೆಯ ಫುಟ್ಪಾತ್ನ ಚರಂಡಿ ಬಳಿ ತಳ್ಳುಗಾಡಿಗಳನ್ನು ಇಟ್ಟುಕೊಂಡು ಹಣ್ಣು ಹಂಪಲು ವ್ಯಾಪಾರ ಮಾಡುತ್ತಿದ್ದರು. ಕೊಳೆತ ಹಣ್ಣುಗಳನ್ನು ಚರಂಡಿಯಲ್ಲಿಯೇ ಬಿಸಾಕಿ ತೆರಳುತ್ತಿದ್ದರು. (ಮೊದಲ ಪುಟದಿಂದ) ಈ ಹಣ್ಣಿನ ಮೇಲೆ ಚರಂಡಿಯಲ್ಲಿರುª ನೊಣಗಳು ಕೂರುತ್ತಿದ್ದವು. ಇವುಗಳಿಂದ ಖಾಯಿಲೆಗಳಿಗೆ ಆಹ್ವಾನ ನೀಡಿದಂತಾಗಿತ್ತು. ಇದನ್ನು ಗಮನಿಸಿದ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಶ್ರೀನಿವಾಸ್ ಹಾಗೂ ಸಿಬ್ಬಂದಿ ಬುಧವಾರ ಸಂಜೆ 6 ಗಂಟೆ ವೇಳೆ ತೆರಳಿ ತಳ್ಳುಗಾಡಿಗಳು ಬಸ್ ನಿಲ್ದಾಣದ ಸುತ್ತ ಮುತ್ತಲಿನಲ್ಲಿ, ಚರಂಡಿಯ ಬದಿಯಲ್ಲಿ ನಿಲ್ಲಿಸಿ ವ್ಯಾಪಾರ ನಡೆಸದಂತೆ ಮೊದಲ ಬಾರಿಗೆ ಸೂಚನೆ ನೀಡಿ, ಮತ್ತೆ ಮುಂದುವರೆದಲ್ಲಿ ದಂಡ ವಿಧಿಸುವ ಎಚ್ಚರಿಕೆ ನೀಡಿದರು.
ದೂರದ ಊರುಗಳಿಂದ ವ್ಯಾಪಾರಕ್ಕೆಂದು ಬರುವ ವ್ಯಾಪಾರಸ್ಥರು ಬಸ್ ನಿಲ್ದಾಣದ ಆಸು ಪಾಸಿನ,ಜನರು ಓಡಾಡುವ ಫುಟ್ಪಾತ್ನಲ್ಲಿ ರಾಜರೋಷವಾಗಿ ವ್ಯಾಪಾರ ಮಾಡುತ್ತಿದ್ದರು. ಇದರಿಂದ ಬಸ್ನಲ್ಲಿ ಬರುವ ಪ್ರಯಾಣಿಕರಿಗೆ ಇಳಿಯುವದೇ ಕಷ್ಟವಾಗಿತ್ತು. ಅಲ್ಲದೆ ಫೈಪೋಟಿಯ ಮೇಲೆ ತಳ್ಳುಗಾಡಿಗಳು ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದರು. ಫುಟ್ಪಾತ್ ಅನ್ನು ಒತ್ತುವರಿ ಮಾಡಿಕೊಂಡು ಸಾರ್ವಜನಿಕರಿಗೆ ಓಡಾಡಲು ಕಷ್ಟವಾಗುತ್ತಿತ್ತು. ಇದರಿಂದ ಎಚ್ಚೆತ್ತ ಪಂಚಾಯ್ತಿ ಇವುಗಳನ್ನು ತೆರವುಗೊಳಿಸಿ ಉಮಾಮಹೇಶ್ವರಿ ದೇವಸ್ಥಾನದ ಮೇಲ್ಭಾಗಕ್ಕೆ ಹಾಗೂ ಆರ್ಎಂಸಿ ರಸ್ತೆ ಬಳಿಯಲ್ಲಿ ವ್ಯಾಪಾರ ಮಾಡುವಂತೆ ಸೂಚನೆ ನೀಡಿದೆ.
ಬಸ್ ನಿಲ್ದಾಣ ಸುತ್ತಮುತ್ತಲಿನ ಅಂಗಡಿ ಮುಂಗ್ಗಟ್ಟುಗಳಲ್ಲಿ ವ್ಯಾಪಾರ ಮಾಡುವವರು ತಮ್ಮ ವಸ್ತುಗಳನ್ನು ರಸ್ತೆ ಬದಿಗೆ ತಂದು ಇಟ್ಟಿರುವದರಿಂದ ಸಾರ್ವಜನಿಕರ ಓಡಾಟಕ್ಕೆ ಅನಾನುಕೂಲವಾಗಿತ್ತು ಇದನ್ನು ಗಮನಿಸಿದ ಪಂಚಾಯ್ತಿ ಅಧಿಕಾರಿಗಳು ಇಂತಹ ಅಂಗಡಿ ಮಳಿಗೆಗಳಿಗೆ ಎಚ್ಚರಿಕೆ ನೀಡಿ ವಸ್ತುಗಳನ್ನು ರಸ್ತೆ ಬದಿಯಲ್ಲಿ ಇಡದೆ ಅಂಗಡಿಯ ಒಳ ಭಾಗದಲ್ಲಿ ಇಡುವಂತೆ ಸೂಚನೆ ನೀಡಿದ್ದಾರೆ.
ಪಾನಿಪುರಿ ಮಾರುವ ಅಂಗಡಿಗಳಿಗೆ ತೆರಳಿ ಪರಿಶೀಲನೆ ನಡೆಸಿ ಥರ್ಮಕೋಲ್ನಿಂದ ತಯಾರಿಸಿದ ವಸ್ತುಗಳನ್ನು ಬಳಸದಂತೆ ಎಚ್ಚರಿಕೆ ನೀಡಿ ಇದರ ಬದಲಿಗೆ ಸ್ಟೀಲ್ ತಟ್ಟೆಗಳನ್ನು ಬಳಸುವಂತೆ ಸೂಚನೆ ನೀಡಿ ಥರ್ಮಕೋಲ್ನಿಂದ ತಯಾರಿಸಿದ ವಸ್ತುಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದರು. ಇದೇ ರೀತಿ ಮುಂದುವರೆದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ನಗರದಲ್ಲಿ ಕಸ ನಿರ್ಮೂಲನೆಗೆ ಪಂಚಾಯ್ತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದು, ಇತ್ತೀಚಿನ ದಿನದಲ್ಲಿ ಕಸ ಸಮಸ್ಯೆ ಕಡಿಮೆಯಾಗುತ್ತಿದೆ. ಮುಂಜಾನೆ ಹಾಗೂ ಸಂಜೆ ವೇಳೆಯಲ್ಲಿ ಪಂಚಾಯ್ತಿಯ ವಾಹನಗಳು ನಗರದಲ್ಲಿ ಸಂಚರಿಸಿ ಕಸವನ್ನು ಸಂಗ್ರಹಿಸುತ್ತಿವೆ. ಎಲ್ಲೆಂದರಲ್ಲಿ ಕಸ ಸುರಿಯುವವರ ಮೇಲೆ ನಿಗಾ ವಹಿಸಿರುವ ಪಂಚಾಯ್ತಿ ಸಿಬ್ಬಂದಿಗಳು ಆಯಾಕಟ್ಟಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಕಸ ಸಮಸ್ಯೆ ನಿಯಂತ್ರಣ ಮಾಡುತ್ತಿದ್ದಾರೆ. ಪಂಚಾಯ್ತಿಯ ಕಾರ್ಯ ವೈಖರಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ದಾಳಿಯ ಸಂದರ್ಭ ಹಸಿರುದಳದ ಅಧಿಕಾರಿ ಹರೀಶ್ ಪಂಚಾಯ್ತಿ ಸಿಬ್ಬಂದಿ ರಾಜು,ಸತೀಶ್,ನವೀನ್,ಸುಬ್ರಮಣಿ, ನೌಶದ್ ಮುಂತಾದವರು ಹಾಜರಿದ್ದರು.