ಸುಂಟಿಕೊಪ್ಪ, ನ. 21: ಕೂಲಿ ಕೆಲಸಕ್ಕೆ ಮನೆಗೆ ಬೀಗ ಹಾಕಿ ತೆರಳಿದ್ದ ಮನೆಗೆ ಕನ್ನಹಾಕಿ ಚಿನ್ನಾಭರಣ ಅಪಹರಿಸಿದ ಮಹಿಳೆಯನ್ನು ಸುಂಟಿಕೊಪ್ಪ ಪೊಲೀಸರು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಮತ್ತಿಕಾಡು ಗ್ರಾಮದ ಅತ್ತೂರು ನಲ್ಲೂರು ‘ಡಿ’ ಎಸ್ಟೇಟ್‍ನ ಲೈನ್ ಮನೆಯಲ್ಲಿ ವಾಸವಾಗಿದ್ದ ಎಂ. ಬಾಬು ಅವರು ಮನೆಯ ಗಾಡ್ರೇಜ್‍ನಲ್ಲಿ 1 ಜೊತೆ ಚಿನ್ನದ ಓಲೆ, ಚಿನ್ನದ ಚೈನನ್ನು ಇಟ್ಟು ಕೂಲಿ ಕೆಲಸಕ್ಕೆ ತಾ. 19ರಂದು ತೆರಳಿದ್ದರು. ವಾಪಸು ಬಂದು ನೋಡಿದಾಗ ಅಪಹರಣವಾಗಿದ್ದುದು ಕಂಡು ಬಂದಿದೆ. ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ಇವರ ನಿರ್ದೇಶನದಂತೆ ಸೋಮವಾರಪೇಟೆ ಡಿವೈಎಸ್‍ಪಿ ಪಿ.ಕೆ.ಮುರಳೀಧರ್ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಕುಮಾರ ಆರಾಧ್ಯ ಸುಂಟಿಕೊಪ್ಪ ಪೊಲೀಸ್ ಉಪನಿರೀಕ್ಷಕ ಬಿ.ತಿಮ್ಮಪ್ಪ ಹಾಗೂ ಸಿಬ್ಬಂದಿಗಳು ತನಿಖೆ ನಡೆಸಿ ಕಳವು ಮಾಡಿದ ಆರೋಪಿ ಸಿದ್ದಾಪುರ ಅತ್ತಿಮಂಗಲ ಆಭ್ಯತ್‍ಮಂಗಲದ ಶೇಖರ ಅವರ ಪತ್ನಿ ಕಾವೇರಿ ಎಂಬಾಕೆಯನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.