ಮಡಿಕೇರಿ, ನ. 21: ‘ಪಾರ್ಕ್’- ಉದ್ಯಾನವನ ಎಂಬ ಪದ ಕೇಳಿದಾಕ್ಷಣ ಎಲ್ಲ ಸ್ಮøತಿಪಟಲದಲ್ಲಿ ಸುಳಿದಾಡುವದು ಹಚ್ಚ - ಹಸುರಿನ ಆವರಣದೊಳಗೆ ನಳ - ನಳಿಸುವ ಬಣ್ಣ - ಬಣ್ಣದ ಹೂಗಳು..., ಮರ-ಗಿಡಗಳ ನಡುವೆ ಅಲಂಕಾರಿಕಾ ಮೂರ್ತಿಗಳು..., ಕಲ್ಲಿನ, ಕಬ್ಬಿಣದ ಕುರ್ಚಿಗಳು..., ಅಲ್ಲಿ ಕುಳಿತು ಸೌಂದರ್ಯ ಆರಾಧಿಸುತ್ತಾ ತಣ್ಣನೆಯ ಗಾಳಿ ಸೇವನೆ ಮಾಡುವ ಪ್ರಕೃತಿ ಆರಾಧಕರು...,ಕೈ-ಕೈ ಹಿಡಿದು ವಿಹರಿಸುವ ಜೋಡಿಗಳು..., ಆಡಿ - ನಲಿದಾಡುವ ಮಕ್ಕಳು..., ಆದರೆ..., ಇಲ್ಲಿ ಎಲ್ಲವೂ ತದ್ವಿರುದ್ಧ..., ಮಂಜಿನ ನಗರಿಯೆಂದೇ ಖ್ಯಾತಿ ಹೊಂದಿರುವ ಮಡಿಕೇರಿಯಲ್ಲಿರುವ ಉದ್ಯಾನಗಳು ಕಾಡಿನಿಂದಾವೃತವಾಗಿವೆ. ಲಕ್ಷಾಂತರ ರೂಪಾಯಿ ವೆಚ್ಚಮಾಡಿ ನಿರ್ಮಿಸಿರುವ ಈ ಉದ್ಯಾನಗಳು ಸಮರ್ಪಕ ನಿರ್ವಹಣೆಯಿಲ್ಲದೆ ಕುರುಚಲು ಕಾಡು, ಪಾರ್ಥೇನಿಯಂನಿಂದ ಕಳಾಹೀನವಾಗಿ ಕಣ್ಣಿಗೆ ರಾಚುತ್ತಿದೆ. ಮಡಿಕೇರಿ ನಗರಸಭೆ ವ್ಯಾಪ್ತಿಗೊಳಪಡುವ ಕೆಲವು ವಾರ್ಡ್‍ಗಳಲ್ಲಿ ಉದ್ಯಾನಗಳಿಗೆಂದು ಮೀಸಲಿಟ್ಟ ಜಾಗದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಉದ್ಯಾನ ನಿರ್ಮಿಸಲಾಗಿದೆ. ಆದರೆ, ನಂತರದಲ್ಲಿ ಉದ್ಯಾನದಲ್ಲಿ ಒಂದೇ ಒಂದು ಗಿಡವನ್ನು ನೆಡದೇ ಇರುವದರಿಂದ ಅಭಿವೃದ್ಧಿಪಡಿಸಲಾಗಿರುವ ಉದ್ಯಾನಗಳೀಗ ಪಾಳುಬಿದ್ದಿವೆ. ಗುತ್ತಿಗೆದಾರರು ಅಭಿವೃದ್ಧಿಪಡಿಸಿ, ನಗರಸಭೆಯ ಸುಪರ್ದಿಗೆ ವಹಿಸಿದ ಬಳಿಕ ಯಾರೂ ಕೂಡ ತಿರುಗಿ ನೋಡದ್ದರಿಂದ ಉದ್ಯಾನಗಳು ಈ ಪರಿಸ್ಥಿತಿಗೆ ತಲಪಿವೆ.ಇಲ್ಲಿನ ಪೆನ್ಷನ್‍ಲೇನ್‍ನಲ್ಲಿ ಉದ್ಯಾನಕ್ಕೆ ಮೀಸಲಿಟ್ಟಿದ್ದ ಜಾಗವನ್ನು ನಗರಸಭೆ ವತಿಯಿಂದ ಅಭಿವೃದ್ಧಿಪಡಿಸಲಾಗಿದೆ. ಸುಮಾರು ರೂ.5 ಲಕ್ಷ ವೆಚ್ಚದಲ್ಲಿ ತಡೆಗೋಡೆ, ಮೆಟ್ಟಿಲುಗಳನ್ನು ನಿರ್ಮಿಸಿ, ಇಂಟರ್‍ಲಾಕ್ ಅಳವಡಿಸಿ ಉದ್ಯಾನವನ್ನಾಗಿ ಮಾರ್ಪಡಿಸಲಾಗಿದೆ. ಅದರಂತೆ ಕಾವೇರಿ ಬಡಾವಣೆ ಯಲ್ಲಿಯೂ ಉದ್ಯಾನಕ್ಕೆ ಮೀಸಲಿಟ್ಟ ಜಾಗವನ್ನು ರೂ. 5 ಲಕ್ಷದಲ್ಲಿ ಅಭಿವೃದ್ಧಿಪಡಿಸಿ, ಸುತ್ತಲೂ ಬೇಲಿ ಅಳವಡಿಸಲಾಗಿದೆ.
ಇದರೊಂದಿಗೆ ಈ ಹಿಂದಿನಿಂದಲೂ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಬಳಿ ಇರುವ ಉದ್ಯಾನವನ್ನು ಕೂಡ ರೂ. 10 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.(ಮೊದಲ ಪುಟದಿಂದ)
ಸೊರಗಿದ ವನ...
ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗಿದೆಯಾದರೂ ನಿರ್ವಹಣೆಯಿಲ್ಲದೆ ಸೊರಗಿ ಹೋಗಿವೆ. ಪೆನ್ಷನ್‍ಲೇನ್ ಬಳಿ ಇರುವ ಉದ್ಯಾನ ಎತ್ತರದ ಪ್ರದೇಶದಲ್ಲಿದ್ದು, ನಗರದ ವಿಹಂಗಮ ದೃಶ್ಯ ಕಾಣಸಿಗುತ್ತದೆ. ಆದರೆ ಒಂದೇ ಒಂದು ಹೂವಿನ ಗಿಡಗಳಿಲ್ಲ..., ಕುಳಿತುಕೊಳ್ಳಲು ಆಸನದ ವ್ಯವಸ್ಥೆಗಳು, ಮಕ್ಕಳ ಆಟಿಕೆಗಳಿಲ್ಲದೆ ಈ ಉದ್ಯಾನಕ್ಕೆ ಯಾರೂ ಹೋಗುತ್ತಿಲ್ಲ.
ಕಾವೇರಿ ಬಡಾವಣೆಯಲ್ಲಿ ಇಂಟರ್‍ಲಾಕ್ ಹಾಕಿ ಬೇಲಿ ನಿರ್ಮಿಸಿದ ಬಳಿಕ ಒಂದೇ ಒಂದು ಗಿಡದ ಬೀಜ ಕೂಡ ಬಿತ್ತಿಲ್ಲ. ಇಂಟರ್‍ಲಾಕ್ ಅಳವಡಿಸಿದ ಆರಂಭದಲ್ಲಿ ಬಡಾವಣೆಯ ಹಾಗೂ ಸುತ್ತಮುತ್ತಲಿನ ಮಕ್ಕಳು ಬಂದು ಆಟವಾಡುತ್ತಿದ್ದರು. ವಯಸ್ಸಾದವರು ಬೆಳಿಗ್ಗೆ- ಸಂಜೆ ವಿಹರಿಸುತ್ತಿದ್ದರು. ನಂತರದಲ್ಲಿ ನಿರ್ವಹಣೆಯಿಲ್ಲದೆ ಕಾಡು ಬೆಳೆಯಲಾರಂಭಿಸಿ ದೊಡ್ಡ ಕಾನನದಂತೆ ಮಾರ್ಪಾಡಾಯಿತು. ಒಮ್ಮೆ ಪೌರ ಕಾರ್ಮಿಕರು ಕಾಡು ಕಡಿದರಾದರೂ ಇದೀಗ ಮತ್ತೆ ಕಾಡು ಆವರಿಸಿದೆ.
ಆರೋಗ್ಯಾಧಿಕಾರಿ ಕಚೇರಿ ಬಳಿ ಇರುವ ಉದ್ಯಾನದಲ್ಲೂ ಜನರು ವಿಹರಿಸುತ್ತಿದ್ದರು. ಇದೀಗ ಅವ್ಯವಸ್ಥೆಯಾಗಿರುವದರಿಂದ ಯಾರೂ ಸುಳಿಯುತ್ತಿಲ್ಲ. ಕಾಡು ಬೆಳೆದಿರುವದರಿಂದ ಹಾವು - ಚೇಳುಗಳ ಭಯ ಕೂಡ ಕಾಡುತ್ತಿದೆ. ಇತ್ತ ಆಕಾಶವಾಣಿ ಬಳಿಯ ತಿರುವಿನ ಜೋಡಿ ರಸ್ತೆ ನಡುವೆ ಇರುವ ಉದ್ಯಾನವನ ಕೂಡ ನಿರ್ವಹಣೆಯಿಲ್ಲದೆ ಕಾಡು ಕೂಡಿದೆ. ಡಿ.ಸಿ.ಸಿ. ಬ್ಯಾಂಕ್ ಎದುರು ಇರುವ ಉದ್ಯಾನದ ನಿರ್ವಹಣೆ ಆಗುತ್ತಿದೆಯಾದರೂ ಜನರು, ಮಕ್ಕಳು ಉದ್ಯಾನದಲ್ಲಿ ಸುಳಿದಾಡಲು ಭಯಪಡುವಂತಾಗಿದೆ. ಉದ್ಯಾನ ನಿರ್ಮಾಣ ಸಂದರ್ಭ ಅಲ್ಲಿದ್ದ ವಿದ್ಯುತ್ ಟ್ರಾನ್ಸ್‍ಫಾರ್ಮರನ್ನು ತೆರವುಗೊಳಿಸಿದ್ದರಿಂದ ಅಲ್ಲಿರುವ ಆಸನಗಳಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲದಂತಾಗಿದೆ. ಟ್ರಾನ್ಸ್ ಫಾರ್ಮರ್ ತೆರವುಗೊಳಿಸಿದರೆ ಉದ್ಯಾನ ಉಪಯೋಗಕ್ಕೆ ಬರಬಹುದು.
ಇನ್ನು ಕನ್ನಿಕಾ ಬಡಾವಣೆ, ಟಿ.ಜಾನ್ ಬಡಾವಣೆ ಸೇರಿದಂತೆ ಹಲವು ಬಡಾವಣೆಗಳಲ್ಲಿ ಉದ್ಯಾನಕ್ಕೆ ಜಾಗ ಮೀಸಲಿರಿಸಲಾಗಿದೆಯಾದರೂ ಇನ್ನೂ ಕೂಡ ಅಭಿವೃದ್ಧಿಯಾಗಿಲ್ಲ.
ನಿರ್ವಹಣೆ ಅಗತ್ಯ
ಮಡಿಕೇರಿಯ ಪ್ರವೇಶದ್ವಾರ ಫೀ.ಮಾ.ಕಾರ್ಯಪ್ಪ ವೃತ್ತದ ಬಳಿ ಇರುವ ಉದ್ಯಾನವನ್ನು ರೋಟರಿ ಸಂಸ್ಥೆಯವರು ನಿರ್ವಹಣೆ ಮಾಡುತ್ತಿದ್ದು, ಉತ್ತಮವಾಗಿದೆ. ಪ್ರತಿನಿತ್ಯ ಮಕ್ಕಳು ಅಲ್ಲಿ ಆಟವಾಡುತ್ತಾರೆ. ಹಿರಿಯರು ವಿಹರಿಸುತ್ತಾರೆ. ಪ್ರವಾಸಿಗರು ಕೂಡ ಆನಂದಿಸುತ್ತಾರೆ. ಇದೇ ರೀತಿ ಇನ್ನುಳಿದ ಉದ್ಯಾನಗಳನ್ನೂ ನಿರ್ವಹಣೆ ಮಾಡಿದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದಕ್ಕಾದರೂ ಸಾರ್ಥಕವಾಗಬಹುದು. ನಗರಸಭೆ ಈ ಬಗ್ಗೆ ಗಮನಹರಿಸಬೇಕಿದೆಯಷ್ಟೇ. ಈ ನಿಟ್ಟಿನಲ್ಲಿ ಯಾವದಾದರೂ ಸಂಘ- ಸಂಸ್ಥೆಗಳು, ಖಾಸಗಿಯವರು ಆಸಕ್ತಿ ತಾಳಿದಲ್ಲೂ ಮಕ್ಕಳಿಗೆ, ಜನತೆಗೆ ಒಂದಿಷ್ಟು ಉಪಯೋಗವಾದೀತು.
-ಕುಡೆಕಲ್ ಸಂತೋಷ್.