ಕೂಡಿಗೆ, ನ. 21: ಕುಶಾಲನಗರ ಹೋಬಳಿ ವ್ಯಾಪ್ತಿಯ ಹಾರಂಗಿ ಜಲಾಶಯದ ವ್ಯಾಪ್ತಿಗೆ ಒಳಪಡುವ ಕೊಡಗಿನ ಗಡಿಭಾಗ ಶಿರಂಗಾಲದವರೆಗೆ ಹಾರಂಗಿ ನೀರನ್ನು ಉಪಯೋಗಿಸಿಕೊಂಡು ಭತ್ತದ ಬೆಳೆಯನ್ನು ಬೆಳೆಯಲಾಗಿದೆ. ಇದೀಗ ಹಾರಂಗಿ ಅಚ್ಚಕಟ್ಟು ವ್ಯಾಪ್ತಿಗೆ ಒಳಪಡುವ ಹುದುಗೂರು, ಮದಲಾಪುರ, ಹೆಬ್ಬಾಲೆ, ಶಿರಂಗಾಲದವರೆಗೆ ಭತ್ತದ ಬೆಳೆಯು ಕಟಾವಿನ ಹಂತದಲ್ಲಿದೆ. ಈಗಾಗಲೇ ಈ ಪ್ರದೇಶಗಳಲ್ಲಿ ಕೃಷಿ ಇಲಾಖೆಯಿಂದ ಮಣ್ಣಿನ ಆಧಾರಿತ ಮತ್ತು ಮೂರು ತಿಂಗಳ ಬೆಳೆಯಾದ ತನು, ಐಆರ್64, ಐಆರ್20 ಮುಂತಾದ ತಳಿಗಳ ಭತ್ತದ ಬೆಳೆಯು ಕಟಾವಿಗೆ ಬಂದಿದ್ದು, ರೈತರು ಕೊಯ್ಲು ಮಾಡಲು ಮಳೆಯ ಅಡ್ಡಿಯಿಂದಾಗಿ ಸಾಧ್ಯವಾಗುತ್ತಿಲ್ಲ. ಮಳೆಯ ನಡುವೆ ಬೆಳೆಯನ್ನು ಕೊಯ್ಲು ಮಾಡಿದರೆ, ಹಸುಗಳಿಗೆ ಬೇಕಾಗಿರುವ ಹುಲ್ಲ ಸಿಗುವದಿಲ್ಲ ಎಂಬ ಆತಂಕದಲ್ಲಿ ರೈತರಿದ್ದಾರೆ.
ಕೆಲವು ಗ್ರಾಮಗಳಲ್ಲಿ ಕಟಾವಿನ ದಿನಗಳು ಮುಗಿಯುತ್ತ ಬಂದಿದ್ದು, ಭತ್ತವು ಅಲ್ಲಿಯೇ ಉದುರುತ್ತಿರುವದು ಸಹ ಕಂಡುಬರುತ್ತಿದೆ. ಈ ಸಾಲಿನಲ್ಲಿ ನೀರಾವರಿ ಇಲಾಖೆಯವರು ಸಂಕಷ್ಟಕ್ಕೊಳಗಾಗದಂತೆ ನಾಲೆಯಲ್ಲಿ ನೀರನ್ನು ಹರಿಸಿದ್ದು, ಇದರಿಂದ ಉತ್ತಮ ಬೆಳೆ ಬಂದಿದೆ. ಆದರೆ, ಉತ್ತಮ ಬೆಳೆ ಬಂದರೂ ಸಹ ಕಟಾವು ಮಾಡಲು ಸಾಧ್ಯವಾಗದೆ, ಭತ್ತವು ಗದ್ದೆಯಲ್ಲಿಯೇ ಉದುರಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.