ಗೋಣಿಕೊಪ್ಪಲು, ನ. 21: ಬಾಳೆಲೆ ಹೋಬಳಿಯ ಕಂದಾಯ ಕಚೇರಿಯು ಅವ್ಯವಸ್ಥೆಗಳಿಂದ ಕೂಡಿದ್ದು ಇಲ್ಲಿನ ರೈತಾಪಿ ವರ್ಗ, ಸಾರ್ವಜನಿಕರು ವಿವಿಧ ತುರ್ತು ಸೇವೆಯಿಂದ ವಂಚಿತರಾಗುತ್ತಿದ್ದಾರೆ.ಈ ನಿಟ್ಟಿನಲ್ಲಿ ಅಲ್ಲಿನ ಗ್ರಾಮಸ್ಥರು ತಮಗಾಗುತ್ತಿರುವ ಅನ್ಯಾಯದ ಬಗ್ಗೆ ‘ಶಕ್ತಿ’ಯೊಂದಿಗೆ ಅಳಲನ್ನು ತೋಡಿಕೊಂಡಿದ್ದಾರೆ.

ಬಾಳೆಲೆ ನಾಡ ಕಚೇರಿ ಹಾಗೂ ಕಂದಾಯ ನಿರೀಕ್ಷಕರ ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶಿಥಿಲಗೊಂಡಿರುವ ಕಟ್ಟಡ, ಯುಪಿಎಸ್ ದುರಸ್ತಿ ಇತ್ಯಾದಿ ಸಕಾಲ ಸೇವೆ ಇಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದೆ. ಅತ್ಯುತ್ತಮ ಆಧಾರ್ ನೋಂದಣಿ ಕೇಂದ್ರ ಎಂದು ಗುರುತಿಸಲಾಗಿದ್ದರೂ, ಇದೀಗ ವಿಳಂಬವಾಗುತ್ತಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೃಷಿ ಫಸಲು ನಷ್ಟ ಮಾಡಿಕೊಂಡಿರುವವರಿಗೆ ಇನ್ನೂ ಸೂಕ್ತ ಪರಿಹಾರ ದೊರೆಯದೆ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಮೂಲವೊಂದರ ಪ್ರಕಾರ ಇನ್ನೂ ಶೇ.80 ರಷ್ಟು ಮಂದಿಗೆ ಬೆಳೆಹಾನಿ ಪರಿಹಾರ ಸಿಕ್ಕಿಲ್ಲ. ಕಳೆದ 6 ವರ್ಷಗಳಿಂದ ಇಲ್ಲಿನ ಖಾಸಗಿ ವ್ಯಕ್ತಿಗಳ ಹಳೆಯ ಕಟ್ಟಡದಲ್ಲಿ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು, ನೂತನ ಕಂದಾಯ ಇಲಾಖೆ ಕಟ್ಟಡ ನಿರ್ಮಾಣ ಕಾರ್ಯ ಇನ್ನೂ ಆರಂಭವಾಗಿಲ್ಲ. ಹಳೆಯ ಕಟ್ಟಡ ಮಳೆಗಾಲದಲ್ಲಿ ಸೋರುತ್ತಿದ್ದು ಇಲ್ಲಿ ಸುಸಜ್ಜಿತ ‘ರೆಕಾರ್ಡ್ ರೂಂ’ ಇಲ್ಲದೆ ಅಧಿಕಾರಿಗಳೂ ಸಮಸ್ಯೆ ಎದುರಿಸುತ್ತಿದ್ದಾರೆ.

ಬಾಳೆಲೆ ಕೃಷಿ ಇಲಾಖೆ ಕಟ್ಟಡ ಸಮೀಪ ನೂತನ ಕಂದಾಯ ಇಲಾಖೆ ಕಟ್ಟಡ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿದ್ದು, ರೂ.18 ಲಕ್ಷ ಅನುದಾನ ಬಿಡುಗಡೆ ಗೊಂಡಿದೆ. ನಿರ್ಮಿತಿ ಕೇಂದ್ರಕ್ಕೆ ಕಟ್ಟಡ ಕಾಮಗಾರಿ ಗುತ್ತಿಗೆ ನೀಡಲಾಗಿದ್ದು ಇನ್ನೂ ಯಾವದೇ ಕೆಲಸ ಅಲ್ಲಿ ಕಂಡು ಬಂದಿಲ್ಲ.

ಈ ಹಿಂದಿನ ಜಿಲ್ಲಾಧಿಕಾರಿ ವಿನ್ಸೆಂಟ್ ಡೇವಿಡ್ ಡಿಸೋಜಾ ಅವರು ಬಾಳೆಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇಲ್ಲಿನ ವಿಜಯಲಕ್ಷ್ಮಿ ಪ.ಪೂ.ಕಾಲೇಜು ಸಭಾಂಗಣದಲ್ಲಿ ಹೋಬಳಿ ಮಟ್ಟದ ಸಂಪರ್ಕ ಸಭೆಯನ್ನೂ ನಡೆಸಿದ್ದರು.ನಂತರ ಯಾವದೇ ಜಿಲ್ಲಾಧಿಕಾರಿಗಳು ಇತ್ತ ಭೇಟಿ ನೀಡಿಲ್ಲ. ಸಮಸ್ಯೆಗಳೂ ಪರಿಹಾರವಾಗಿಲ್ಲ ಎನ್ನಲಾಗಿದೆ.

ಬಾಳೆಲೆ ಹೋಬಳಿ ವ್ಯಾಪ್ತಿಗೆ ದೇವನೂರು, ನಿಟ್ಟೂರು, ಕೊಟ್ಟಗೇರಿ, ನಲ್ಲೂರು, ಬಿಳೂರು, ಬೆಸಗೂರು, ರುದ್ರಬೀಡು, ಧನುಗಾಲ ಕಂದಾಯ ಗ್ರಾಮಗಳು ಒಳಗೊಂಡಿದ್ದು ಸುಮಾರು 65,983.69 ಎಕರೆ ವಿಸ್ತೀರ್ಣ ಹೊಂದಿದೆ. ಇದರಲ್ಲಿ 44 ಸಾವಿರ ಎಕರೆ ಅರಣ್ಯ ಪ್ರದೇಶವಿದೆ. ಪ್ರಸ್ತುತ ವರ್ಷ ಸುರಿದ ಮಳೆಯಿಂದಾಗಿ ಈ ಭಾಗದ ಜನತೆಯೂ ಕಷ್ಟ,ನಷ್ಟ ಅನುಭವಿಸಿದ್ದರು. ಕಾಫಿ, ಕಾಳುಮೆಣಸು, ಅಡಿಕೆ, ಭತ್ತ, ಶುಂಠಿ ಇತ್ಯಾದಿ ಕೃಷಿಯಲ್ಲಿ ನಷ್ಟ ಉಂಟಾದ ಹಿನ್ನೆಲೆ ಸುಮಾರು 2100 ಅರ್ಜಿ ಸಲ್ಲಿಕೆಯಾಗಿತ್ತು. ಆದರೆ, ಇನ್ನೂ ಎಲ್ಲರಿಗೂ ಪರಿಹಾರ ದೊರೆತಿಲ್ಲ. ಸಂತ್ರಸ್ತರ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರ ಸಂದಾಯವಾಗಬೇಕಾಗಿದ್ದು, ದಿನನಿತ್ಯ ಪರಿಹಾರಕ್ಕಾಗಿ ಅಲೆಯುವದೇ ಹಲವು ರೈತರ ಕಾಯಕವಾಗಿದೆ ಎನ್ನಲಾಗಿದೆ.

ಎಷ್ಟೇ ಕೃಷಿ ಫಸಲು ನಷ್ಟವಾಗಿದ್ದರೂ ಸರ್ಕಾರವು 5 ಎಕರೆವರೆಗೆ ಮಾತ್ರ ಪರಿಹಾರ ನೀಡುತ್ತಿದ್ದು, ಕಾಫಿ,ಕಾಳು ಮೆಣಸು,ಅಡಿಕೆ ಇತ್ಯಾದಿ ಮಿಶ್ರಬೆಳೆಗೆ ಎಕರೆಗೆ ರೂ.9 ಸಾವಿರ ಪರಿಹಾರ, ಭತ್ತ ರೂ. 4500 ಪರಿಹಾರ ನೀಡಲಾಗುತ್ತಿದೆ. ಬಾಳೆಲೆ ಹೋಬಳಿಯು ಸುಮಾರು 12,917 ಜನಸಂಖ್ಯೆಯನ್ನು ಹೊಂದಿದ್ದು, ಗಿರಿಜನ ಆಶ್ರಮ ಶಾಲೆ ನಿಟ್ಟೂರು (32 ನಿರಾಶ್ರಿತರು), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (12 ನಿರಾಶ್ರಿತರು) ಹಾಗೂ ಧನುಗಾಲ ಅಶ್ರಮ ಶಾಲೆ ನಿರಾಶ್ರಿತರ ಕೇಂದ್ರ ಒಳಗೊಂಡಂತೆ ಸುಮಾರು 189 ನಿರಾಶ್ರಿತರಿಗೆ ತಲಾ ರೂ.10 ಸಾವಿರದಂತೆ ಪರಿಹಾರ ನೀಡಲಾಗಿದೆ ಎಂದು ಕಂದಾಯ ನಿರೀಕ್ಷಕ ಹರೀಶ್ ಮಾಹಿತಿ ನೀಡಿದ್ದಾರೆ. ಅಮ್ಮತ್ತಿ ಹೋಬಳಿಯ ಪ್ರಭಾರ ಕಂದಾಯ ನಿರೀಕ್ಷರಾಗಿಯೂ ಹರೀಶ್ ಕಾರ್ಯ ನಿರ್ವಹಿಸುತ್ತಿದ್ದು, ಜನರ ಕೆಲಸ ಶೀಘ್ರ ಮಾಡಿಕೊಡಲು ಹಿನ್ನೆಡೆಯಾಗಿದೆ ಎಂದು ಹೇಳಲಾಗುತ್ತಿದೆ.

ಬಾಳೆಲೆ ವ್ಯಾಪ್ತಿಯಲ್ಲಿ ಈ ಬಾರಿಯ ಮಳೆ ಗಾಳಿಗೆ 71 ಮನೆಗಳು ಹಾನಿಗೊಳಗಾಗಿದ್ದು, 3 ಮನೆಗಳು ಪೂರ್ಣ ಹಾನಿಯಾಗಿದ್ದು ಇನ್ನೂ ಪರಿಹಾರ ಮೊತ್ತ ಬರಲಿಲ್ಲ. ಕಂದಾಯ ಇಲಾಖೆಯ ನಿಧಾನಗತಿಯಿಂದಾಗಿ ರೇಷನ್ ಕಾರ್ಡ್, ಪೌತಿಖಾತೆ ಆಂದೋಲನ, ಬೆಳೆಕಾಲಂ ನಮೂದು ವಿಳಂಬವಾಗಿದ್ದು ಬ್ಯಾಂಕ್ ಸಾಲ ಹೊಂದಲೂ ಕಷ್ಟವಾಗಿದೆ ಎಂದು ಕೃಷಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇಲಾಖಾಧಿಕಾರಿಗಳ ಮಟ್ಟದ ಸಂಪರ್ಕ ಸಭೆ, ಶಾಸಕರ ಸಂಪರ್ಕ ಸಭೆ, ಜಿಲ್ಲಾಧಿಕಾರಿಗಳ ಮಟ್ಟದ ಸಭೆ ನಡೆದು ವರ್ಷಗಳೇ ಕಳೆದಿವೆ. ಬಾಳೆಲೆ ಹೋಬಳಿಗೆ ಕಂದಾಯ ನಿರೀಕ್ಷರು-1 ಹುದ್ದೆ, 3 ಗ್ರಾಮ ಲೆಕ್ಕಿಗರಲ್ಲಿ 1 ಹುದ್ದೆ ಖಾಲಿ ಇದೆ. 3 ಗ್ರಾಮ ಸಹಾಯಕರ ಹುದ್ದೆ ಇದ್ದು, ಇಲ್ಲಿಗೆ ಈಗ ತಾನೇ ನೂತನ ಉಪ ತಹಶೀಲ್ದಾರ್ ಆಗಿ ಎಂ. ಮಂಜುನಾಥ್ ನೇಮಕ ಗೊಂಡಿದ್ದಾರೆ.

ಇಲ್ಲಿನ ಡಾಟಾ ಎಂಟ್ರಿ ಆಪರೇಟರ್ ಆಗಿ ಕಳೆದ 6 ವರ್ಷ ಗಳಿಂದ ಅನಿತಾ ಎಂಬವರು ಉತ್ತಮ ವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ, ಪೂರಕ ವ್ಯವಸ್ಥೆಗಳಿಲ್ಲದೆ ಕೆಲಸ ವಿಳಂಬ ವಾಗುತ್ತಿದೆ. ಈ ನಿಟ್ಟಿನಲ್ಲಿ ನೂತನ ಕಟ್ಟಡವು ಡಾಟಾ ಎಂಟ್ರಿ ಕೊಠಡಿ, ಉಪ ತಹಶೀಲ್ಧಾರ್ ಕಚೇರಿ,ರೆಕಾರ್ಡ್ ರೂಂ, ಕಂದಾಯ ನಿರೀಕ್ಷಕರ ಕೊಠಡಿ, ಗ್ರಾಮ ಲೆಕ್ಕಿಗರ ಕೊಠಡಿ ಹಾಗೂ ಸಾರ್ವಜನಿಕರಿಗೆ, ವಯಸ್ಕರಿಗೆ, ಮಹಿಳೆಯರಿಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಉತ್ತಮ ಕಟ್ಟಡದ ಅವಶ್ಯಕತೆ ಇದೆ ಎಂದು ಇಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ.

ಬಾಳೆಲೆ ಕಂದಾಯ ಇಲಾಖಾ ಕಚೇರಿ ಸಮಸ್ಯೆ ಶೀಘ್ರ ಪರಿಹಾರವಾಗಬೇಕು. ಇಲ್ಲಿನ ಬೆಳೆಗಾರರಿಗೆ ಮಳೆ ಪರಿಹಾರ ಶೀಘ್ರ ಬಿಡುಗಡೆ ಮಾಡಬೇಕು. ನವೆಂಬರ್ 30 ಕ್ಕೂ ಮುನ್ನ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ನ್ಯಾಯಕ್ಕೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಲಾಗುವದು ಎಂದು ಅಲ್ಲಿನ ಗ್ರಾಮಸ್ಥರಾದ ಅರಮಣಮಾಡ ಸತೀಶ್ ದೇವಯ್ಯ, ಚಿಮ್ಮಣಮಾಡ ಕೃಷ್ಣ, ಅಡ್ಡೇಂಗಡ ಅರುಣ, ಪೆÇೀಡಮಾಡ ಸುಖೇಶ್ ಮುಂತಾದವರು ‘ಶಕ್ತಿ’ಗೆ ತಿಳಿಸಿದ್ದಾರೆ.

ವರದಿ: ಟಿ.ಎಲ್.ಶ್ರೀನಿವಾಸ್