(ವಿಶೇಷ ವರದಿ, ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು. ನ. 21: ದ.ಕೊಡಗಿನಲ್ಲಿ ಇತ್ತೀಚೆಗೆ ಹುಲಿ ದಾಳಿ ಸರ್ವೆ ಸಾಮಾನ್ಯವಾದಂತಿದೆ. ರೈತರ ಕಾಫಿ ತೋಟ,ಮನೆಗಳತ್ತ ಹೆಜ್ಜೆ ಹಾಕುತ್ತಿರುವ ಹುಲಿರಾಯ ಕೊಟ್ಟಿಗೆಯಲ್ಲಿರುವ ಹಸುಗಳ ಮೇಲೆ ದಾಳಿ ನಡೆಸಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿರುವದು ಮಾಮೂಲಿಯಾಗಿದೆ. ಇತ್ತೀಚೆಗೆ ಗೋಣಿಕೊಪ್ಪ ಸಮೀಪದ ಅತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಳತ್ಮಾಡು ಗ್ರಾಮದ ಜನನಿಬಿಡ ಪ್ರದೇಶದಲ್ಲಿ ಹುಲಿರಾಯ ರೈತರ ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ಎರಗಿ ತಿನ್ನುವ ಪ್ರಯತ್ನ ನಡೆಸಿತ್ತು. ಆ ಗೋವಿನ ಅಧೃಷ್ಟ ಅಂದು ಚನ್ನಾಗಿತ್ತು. ಅಂಭಾ... ಎಂದು ತನ್ನ ಮಾಲೀಕನನ್ನು ಕರೆಯುತ್ತಿದ್ದಂತೆಯೇ ನಿದ್ರೆಯಲ್ಲಿದ್ದ ಮನೆಯ ಕಾರ್ಮಿಕ ಮಹಿಳೆ ಹಸು ಕಿರುಚಿಕೊಂಡಿದ್ದನ್ನು ಆಲಿಸಿ ಟಾರ್ಚ್ ಲೈಟ್‍ನೊಂದಿಗೆ ಹೊರ ಬಂದು ಬೊಬ್ಬೆ ಹಾಕುತ್ತಿದ್ದಂತೆಯೇ ಹುಲಿರಾಯ ಹಸುವನ್ನು ಬಿಟ್ಟು ಕ್ಷಣಾರ್ಧದಲ್ಲಿ ಕಾಫಿ ತೋಟದಲ್ಲಿ ಮಾಯವಾದ ಘಟನೆ ಕಳತ್ಮಾಡುವಿನಲ್ಲಿ ನಡೆದಿದೆ.
ಸುತ್ತಲು ಮನೆಯಿರುವ ಬಳಿಯೇ ಹಸುಗಳನ್ನು ಕಟ್ಟಲು ಕೊಟ್ಟಿಗೆ ನಿರ್ಮಾಣ ಮಾಡಲಾಗಿದೆ. ಕೂಗಳತೆ ದೂರದಲ್ಲಿ ಕಾರ್ಮಿಕರು ವಾಸಿಸುವ ಲೈನ್ ಮನೆಯಿದೆ.ಇತ್ತೀಚೆಗೆ ಆಹಾರ ಹುಡುಕಿಕೊಂಡು ಆಗಮಿಸಿದ ವ್ಯಾಘ್ರ ಮುಂಜಾನೆ ಮೂರು ಗಂಟೆ ಸುಮಾರಿಗೆ ಕಳತ್ಮಾಡುವಿನ ಕೊಲ್ಲೀರ ದಿನುರವರ ಕೊಟ್ಟಿಗೆಯತ್ತ ಧಾವಿಸಿದೆ. ಕೊಟ್ಟಿಗೆಯ ಕಾಂಪೌಂಡ್ ಹಾರಿ ಬಂದ ಹುಲಿ ರಾಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಎರಗಿದೆ. ಬೆನ್ನು,ಮುಖದ ಭಾಗಕ್ಕೆ ಘಾಸಿಗೊಳಿಸುತ್ತಿದ್ದಂತೆಯೇ ಹಸು ಹುಲಿಯಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟಿದೆ. ತನ್ನ ಕೊಂಬಿನಿಂದ ಹುಲಿಯನ್ನು ಚುಚ್ಚಲು ಪ್ರಯತ್ನಿಸಿದೆ.
ಈ ಸಂದರ್ಭ ಹಸುವಿನ ಎರಡು ಕೋಡುಗಳು ಮುರಿದು ಬಿದ್ದಿವೆ. ಈ ಸಂಧರ್ಭ ಹಸು ಜೋರಾಗಿ ಅಂಭಾ.. ಅಂಭಾ ಎಂದು ಕಿರುಚಿಕೊಂಡಾಗ ಸಮೀಪದ ಲೈನ್ ಮನೆಯಲ್ಲಿದ ವಾಸವಿದ್ದ ಮಹಿಳೆ ತನ್ನ ಗಂಡನಿಗೆ ಹಸು ಕಿರುಚಿಕೊಳ್ಳುತ್ತಿದೆ. ಎದ್ದೇಳು ನೋಡೋಣ ಎಂದು ಟಾರ್ಚ್ ಹಿಡಿದು ಕೊಟ್ಟಿಗೆಯತ್ತ ಧಾವಿಸುತ್ತಿದ್ದಾಗಲೇ ಹುಲಿ, ಹಸುವಿನ ಮೇಲೆರಗಿರುವುದನ್ನು ಕಂಡು ಜೋರಾಗಿ ಕಿರುಚಿಕೊಂಡಿದ್ದಾಳೆ.ಜೊತೆಗಿದ್ದ ಪತಿ ಇದನ್ನು ಕಂಡು ಮನೆಯತ್ತ ಓಟಕ್ಕಿತ್ತಿದ್ದ.ಆದರೆ ಮಹಿಳೆ ಎದೆಗುಂದದೆ ಇನ್ನಷ್ಟು ಜೋರಾಗಿ ಕಿರುಚುತ್ತಿದ್ದಂತೆಯೇ ವ್ಯಾಘ್ರ ಸ್ಥಳದಿಂದ ಕಾಲ್ಕಿತ್ತಿದೆ. ಹುಲಿಯ ಧಾಳಿಗೆ ಹಸುವಿನ ಕುತ್ತಿಗೆ,ಹಣೆ,ಬೆನ್ನಿನ ಭಾಗಕ್ಕೆ ಬಲವಾದ ಗಾಯಗಳಾಗಿದ್ದು ಹಸು ಇನ್ನು ಕೂಡ ಸಾವಿನ ಭಯದಿಂದ ಹೊರ ಬಂದಿಲ್ಲ. ಪಶು ವೈದ್ಯಾಧಿಕಾರಿಗಳು ಹಸುವಿನ ಆರೈಕೆಗೆ ಮುಂದಾಗಿದ್ದು ಹಸು ಚೇತರಿಸಿಕೊಳ್ಳುತ್ತಿದೆ.
ಸದ್ಯಕ್ಕೆ ಹುಲಿ ಬಾಯಿಂದ ಹಸು ಬಚಾವಾಗಿ ತನ್ನ ಪ್ರಾಣ ಉಳಿಸಿಕೊಂಡಿದೆ. ಆದರೆ ಈ ಭಾಗದ ಜಾನುವಾರುಗಳಿಗೆ ಹುಲಿರಾಯ ಯಾವ ಸಂದರ್ಭದಲ್ಲಿ ‘ಎಂಟ್ರಿ’ ಕೊಡುತ್ತಾನೆಂಬುದು ಇಲ್ಲಿನ ಜನತೆಯ ಆತಂಕವಾಗಿದೆ. ಹುಲಿ ಸೆರೆಗೆ ಅರಣ್ಯ ಇಲಾಖೆ ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ.