ಕೂಡಿಗೆ, ನ. 21: ಚಾಮುಂಡೇಶ್ವರಿ ವಿದುಚ್ಛಕ್ತಿ ಸರಬರಾಜು ನಿಗಮ ನಿಯಮಿತದ ವತಿಯಿಂದ ಬೆಳಕು ಯೋಜನೆಯಡಿಯಲ್ಲಿ ವಿದ್ಯುಚ್ಛಕ್ತಿ ಒದಗಿಸುವ ರಾಜ್ಯ ಸರ್ಕಾರದ ಹೊಸ ಯೋಜನೆಗೆ ಹೋಬಳಿ ವ್ಯಾಪ್ತಿಯ ಹೆಬ್ಬಾಲೆ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ. ಹೆಬ್ಬಾಲೆ ಗ್ರಾಮಕ್ಕೆ ಸಮರ್ಪಕವಾದ ವಿದ್ಯುತ್ ಒದಗಿಸುವದು, ಲೈನ್ಗಳ ದುರಸ್ತಿ, ಟ್ಯಾನ್ಸ್ಫಾರ್ಮರ್ಗಳ ಅಳವಡಿಕೆ, ಎಲ್ಲಾ ಕುಟುಂಬಗಳಿಗೆ ಸುವ್ಯವಸ್ಥಿತ ವಿದ್ಯುತ್ ಒದಗಿಸುವ ಯೋಜನೆಗೆ ಮುಂದಿನ ದಿನಗಳಲ್ಲಿ ಚಾಲನೆ ದೊರೆಯಲಿದೆ.
ಈಗಾಗಲೇ ಚೆಸ್ಕಾಂ ವತಿಯಿಂದ ರೂ. 29 ಲಕ್ಷ ಮಂಜೂರಾಗಿದ್ದು, ಕಾಮಗಾರಿಯನ್ನು ನಡೆಸಲು ಕ್ರಿಯಾಯೋಜನೆಯನ್ನು ತಯಾರಿಸಿದ್ದು, ಶೀಘ್ರದಲ್ಲಿಯೇ ಈ ಯೋಜನೆಯು ಕಾರ್ಯಗತಗೊಳ್ಳಲಿದೆ. ಈ ಬೆಳಕು ಯೋಜನೆಯು ಹೋಬಳಿ ವ್ಯಾಪ್ತಿಯ ಒಂದು ಗ್ರಾಮ ಪಂಚಾಯಿತಿಯ ಜನಸಂಖ್ಯೆಯ ಆಧಾರದ ಮೇಲೆ ಹಾಗೂ ಕ್ಷೇತ್ರದ ಶಾಸಕರ ಶಿಫಾರಸ್ಸಿನ ಮೇರೆಗೆ ಹೆಬ್ಬಾಲೆ ಗ್ರಾಮ ಪಂಚಾಯಿತಿಯು ಆಯ್ಕೆಯಾಗಿದ್ದು, ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ.
ಇದೇ ರೀತಿ ಸೋಮವಾರಪೇಟೆ ತಾಲೂಕಿನ ವಿವಿಧ ಹೋಬಳಿ ವ್ಯಾಪ್ತಿಯ ಒಂದೊಂದು ಗ್ರಾಮ ಪಂಚಾಯಿತಿಗಳ ಆಯ್ಕೆಯು ನಡೆದಿದೆ ಎಂದು ತಿಳಿದುಬಂದಿದೆ.