ಸುಂಟಿಕೊಪ್ಪ, ನ. 21: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಜಮಾಬಂದಿ ಕಾರ್ಯಕ್ರಮದಲ್ಲಿ ಕೆಲ ಗ್ರಾ.ಪಂ. ಸದಸ್ಯರ ಗೈರು ಬೆರಳೆಣಿಕೆಯ ಗ್ರಾಮಸ್ಥರ ಹಾಜರಿಯಿಂದ ಸಭೆ ಪಂಚಾಯಿತಿ ಸದಸ್ಯರ ಆಶ್ರಯ ಮನೆಯ ಸುತ್ತ ಕೇಂದ್ರೀಕೃತವಾಗಿತ್ತು.

ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ಮೊದಲು ಮಾತನಾಡಿದ ಗ್ರಾಮಸ್ಥ ಫೈರೋಜ್ ಜಮಾಬಂದಿ ಕಾರ್ಯಕ್ರಮದಲ್ಲಿ 10 ಮಂದಿ ಗ್ರಾಮಸ್ಥರು ಇಲ್ಲ ಗ್ರಾ.ಪಂ. ಸದಸ್ಯರುಗಳು 20 ಮಂದಿಯಲ್ಲಿ 9 ಮಂದಿ ಬಂದಿದ್ದಾರೆ. ಕೋರಂ ಇಲ್ಲದೆ ಸಭೆ ನಡೆಸುವದು ಸರಿಯಾ ಎಂದು ಪ್ರಶ್ನಿಸಿದರು.

ಉಪಾಧ್ಯಕ್ಷ ಪಿ.ಆರ್.ಸುಕುಮಾರ್ ಜಮಾಬಂದಿ ಕಾರ್ಯಕ್ರಮದ ಬಗ್ಗೆ ಧ್ವನಿವರ್ಧಕದಲ್ಲಿ ಪ್ರಚಾರ ನೆಡೆಸಲಾಗಿದೆ ಎಂದು ಸಮರ್ಥಿಸಿದರು. ಪಿಡಿಓ ವೇಣುಗೋಪಾಲ್ ಜಮಾಬಂದಿ ಕಾರ್ಯಕ್ರಮಕ್ಕೆ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗಿದೆ. ಜವಾಬ್ಧಾರಿ ಗ್ರಾಮಸ್ಥರಿಗೆ ಬೇಕು ಎಂದು ಹೇಳಿದರು.

ಕಳೆದ ಗ್ರಾಮ ಸಭೆಯಲ್ಲಿ ಗೈರು ಹಾಜರಾದ ಗ್ರಾ.ಪಂ.ಸದಸ್ಯರ ವಿರುದ್ಧ ಅಧ್ಯಕ್ಷರು ಏನು ಕ್ರಮ ಕೈಗೊಂಡಿದ್ದೀರಾ, ಈ ದಿನ ಸಭೆಗೂ ಕೆಲವರು ಬಂದಿಲ್ಲ ಎಂದು ವಿನ್ಸೆಂಟ್, ಎಂ.ಎಸ್.ಸುನಿಲ್ ಪ್ರಶ್ನಿಸಿದರು. ಅವರಿಗೆ ನೋಟೀಸು ಕೊಡುವದಾಗಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಹೇಳಿದರು.

ಖಂಡನೆ : ಸಭಾ ನಡಾವಳಿಕೆ ಪುಸ್ತಕದಲ್ಲಿ ಗ್ರಾಮಸ್ಥರು ಸಹಿ ಹಾಕುವ ಜಾಗದಲ್ಲಿ ಪೈರೋಜ್ ಎಂಬವರು ಜಮಾಬಂದಿ ಕಾರ್ಯಕ್ರಮದ ಬಗ್ಗೆ ಟೀಕಿಸಿ ಷರಾ ಬರೆದಿದ್ದನ್ನು ಉಪಾಧ್ಯಕ್ಷ ಪಿ.ಆರ್. ಸುಕುಮಾರ್ ಖಂಡಿಸಿದರು. ಗ್ರಾಮಸ್ಥರಾದ ನಿಮ್ಮ ಈ ನಡೆ ಸರಿಯಲ್ಲ ಎಂದು ಮೂದಲಿಸಿದರು. ಫೈರೋಜ್ ಸಮರ್ಥನೆ ಮಾಡಲು ಮುಂದಾದಾಗ ಪಿಡಿಓ ವೇಣುಗೋಪಾಲ್ ಸಮಾಜ ಸೇವಕರು ಎಂದು ಬಿಂಬಿಸುವ ನೀವು ಸಭಾ ನಡಾವಳಿಕೆ ಪುಸ್ತಕದಲ್ಲಿ ಗ್ರಾಮ ಪಂಚಾಯಿತಿ ಜಮಾಬಂಧಿ ಕಾರ್ಯ ಕ್ರಮದ ಬಗ್ಗೆ ಬರೆದಿದ್ದು ಸರಿಯೇ? ಆಶ್ರಯ ಮನೆ ಯೋಜನೆಯಡಿ ಮನೆಯನ್ನು ರಸ್ತೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದೀರಾ ಎಂದು ಆರೋಪಿಸಿದರು.

ಗ್ರಾ.ಪಂ. ಸದಸ್ಯೆ ರಹೆನಾ ಫೈರೋಜ್ ಮಾತನಾಡಿ ಆಶ್ರಯ ಯೋಜನೆಯಡಿ 15 ಲಕ್ಷದ ಮನೆ ನಿರ್ಮಿಸಿದ್ದೇವೆ. ಗ್ರಾ.ಪಂ. ಸದಸ್ಯೆಯಾಗಿ ಗೌರವಧನ ಹೊರತು ಯಾವದೇ ಕಾಮಗಾರಿ ಹಣ ದುರ್ಬಳಕೆ ಮಾಡಿಲ್ಲ. ಗ್ರಾಮದ ಇತರ ಮಂದಿ ರಸ್ತೆ ಚರಂಡಿ ಒತ್ತುವರಿ ಮಾಡಿದ್ದೂ ತನಿಖೆಯಾಗಲಿ ಎಂದು ಹೇಳಿದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಎಫ್. ಸಬಾಸ್ಟಿನ್ ಮಾತನಾಡಿ ನಡಾವಳಿ ಪುಸ್ತಕದಲ್ಲಿ ಫೈರೋಜ್ ಷರಾ ಬರೆದಿದ್ದು ಸರಿಯಲ್ಲ ಆ ಬಗ್ಗೆ ಖಂಡನಾ ನಿರ್ಣಯ ಕೈಗೊಂಡು ಅದನ್ನು ತೆಗೆದು ಹಾಕಿ ರಸ್ತೆ ಒತ್ತುವರಿಯಾಗಿ ಮನೆ ನಿರ್ಮಿಸಿದ ಬಗ್ಗೆ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಳ್ಳಿ ಎಂದು ಹೇಳಿದರು.

ವಿದ್ಯುತ್ ಬಿಲ್ ಚರ್ಚೆ : ಸೆಸ್ಕ್ ಇಲಾಖೆಗೆ ವಿದ್ಯುತ್‍ಬಿಲ್ ಲಕ್ಷಾಂತರ ರೂ. ಉಳಿಸಿಕೊಂಡಿರುವ ಬಗ್ಗೆ ಸುನಿಲ್, ಪಿ.ಎಫ್. ಸಬಾಸ್ಟಿನ್ ಮಾಹಿತಿ ಬಯಸಿದರು. ಇದಕ್ಕೆ ಉತ್ತರಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಚೆಸ್ಕಾಂ ವತಿಯಿಂದ ನೀಡಲಾಗಿರುವ ಬಿಲ್ ಲಕ್ಷಾಂತರ ರೂ. ಅಧಿಕ ಮೊತ್ತ ವ್ಯತ್ಯಯ ಕಂಡು ಬಂದಿದೆ. ಇದರಿಂದ ಚೆಸ್ಕಾಂ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಪರಿಶೀಲನೆ ನಡೆಸಿದ ನಂತರ ಪಾವತಿಸಲಾಗುವದು ಎಂದರು.

ಆ ನಂತರ ಜಮಾಬಂದಿ ಕಾರ್ಯಕ್ರಮದ ಖರ್ಚು ವೆಚ್ಚದ ಬಗ್ಗೆ ಸಭೆ ಅನುªಮೋದನೆ ಪಡೆಯಿತು.

ನೊಡಲ್ ಅಧಿಕಾರಿ ಕೃಷಿ ಇಲಾಖೆಯ ಮನಸ್ವಿ ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ, ಪಂಚಾಯಿತಿ ಸದಸ್ಯರುಗಳಾದ ಚಂದ್ರ, ಬಿ.ಎಂ. ಸುರೇಶ್, ಕೆ.ಇ.ಕರೀಂ,ಗಿರಿಜಾ ಉದಯಕುಮಾರ್, ಎ.ಶ್ರೀಧರ್ ಕುಮಾರ್, ಶಿವಮ್ಮ, ರಹೆನಾ ಸುಲ್ತಾನ್, ರತ್ನ ಹಾಗೂ ಎಎಸ್‍ಐಗಳು ಉಪಸ್ಥಿತರಿದ್ದರು. ಮೊದಲಿಗೆ ಅಂಗನವಾಡಿ ಕಾರ್ಯಕರ್ತೆ ಜಯಂತಿ ಪ್ರಾರ್ಥಿಸಿ, ಬಿಲ್‍ಕಲೆಕ್ಟರ್ ಪುನಿತ್ ಸ್ವಾಗತಿಸಿ ವಾಚಿಸಿದರು.