ಸಿದ್ದಾಪುರ, ನ. 21: ಸಿದ್ದಾಪುರದ ಕರಡಿಗೋಡು ಗ್ರಾಮದಲ್ಲಿ ಕಾಡಾನೆಗಳ ಹಾಗೂ ಕಾಡು ಕೋಣಗಳ ಹಾವಳಿಯ ನಡುವೆ ಇದೀಗ ಹುಲಿಯ ಹೆಜ್ಜೆ ಗುರುತುಗಳು ಪ್ರತ್ಯಕ್ಷಗೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಕಳೆದ ಕೆಲ ತಿಂಗಳಿನಿಂದ ಸಿದ್ದಾಪುರದ ಕರಡಿಗೋಡು ಗ್ರಾಮದಲ್ಲಿ ಕಾಡಾನೆಗಳು ಹಾಗೂ ಕಾಡು ಕೋಣಗಳ ಉಪಟಳ ಹೆಚ್ಚಾಗಿದ್ದು ಇದೀಗ ಕಳೆದ ಕೆಲವು ದಿನಗಳಿಂದ ಕರಡಿಗೋಡುವಿನ ಕಾಫಿ ತೋಟಗಳಲ್ಲಿ ಹುಲಿ ಹೆಜ್ಜೆ ಗುರುತು ಪ್ರತ್ಯಕ್ಷವಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೆಲವು ತೋಟಗಳಲ್ಲಿ ಕಾಫಿ ಹಣ್ಣಾಗಿದ್ದು ಕಾರ್ಮಿಕರು ಕಾಫಿ ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಕರಡಿಗೋಡುವಿನಲ್ಲಿ ಹೆಣ್ಣಾನೆಯೊಂದು ತನ್ನ ಮರಿಯೊಂದಿಗೆ ತೋಟದಲ್ಲಿ ಬೀಡು ಬಿಟ್ಟು ಸುತ್ತಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.