ನಾಪೋಕ್ಲು, ನ.21: ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಕರ್ತವ್ಯದ ಮೇಲೆ ತೆರಳಿದ್ದ ಸೆಸ್ಕ್ ಸಿಬ್ಬಂದಿ ಮೇಲೆ ಗ್ರಾಹಕನೋರ್ವ ಹಲ್ಲೆ ನಡೆಸಿದ್ದು, ಈ ಸಂಬಂಧ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಡಂಗ ಅರಪಟ್ಟು ಗ್ರಾಮದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರುಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಸಲುವಾಗಿ ಅಧಿಕಾರಿಗಳ ನಿರ್ದೇಶನದಂತೆ ಮೂರ್ನಾಡು ಸೆಸ್ಕ್ ಉಪ ಕೇಂದ್ರದ ಸಿಬ್ಬಂದಿ ಕೆ.ವಿ. ನಾಗೇಂದ್ರ ಅವರು ಇಂದು ತೆರಳಿದ್ದರು.

ಕಡಂಗ ಅರಪಟ್ಟುವಿನ ನಿವಾಸಿ ಸಿ.ಎ. ಹಂಸ ಅವರು ರೂ. 1800 ಬಿಲ್ ಬಾಕಿ ಉಳಿಸಿಕೊಂಡಿದ್ದರಿಂದ ನಾಗೇಂದ್ರ ಸಂಪರ್ಕ ಕಡಿತಗೊಳಿಸಲು ಮುಂದಾಗಿದ್ದಾರೆ. ಈ ಸಂದರ್ಭ ಸಲಾಂ ನಾಗೇಂದ್ರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೈಕ್‍ನ ಕೀ ಮತ್ತು ಹೆಲ್ಮೆಟ್ ಕಸಿದುಕೊಂಡು ಬಾಕಿ ವಸೂಲಾತಿಯ ವಿವರದ ಪಟ್ಟಿಯನ್ನು ಕಸಿದುಕೊಂಡು ಹರಿದು ಹಾಕಿದ್ದಲ್ಲದೆ, ಸಮವಸ್ತ್ರವನ್ನೂ ಹರಿದು ಹಾಕಿರುವದಾಗಿ ನಾಗೇಂದ್ರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಹಲ್ಲೆಗೊಳಗಾದ ನಾಗೇಂದ್ರ ವೀರಾಜಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

- ದುಗ್ಗಳ ಸದಾನಂದ