ಮಡಿಕೇರಿ, ನ. 21: ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿಯಿಂದ ಬೆಳೆಗಾರರ ಪರವಾಗಿ ಪ್ರಮುಖ ಅಂಶಗಳನ್ನೊಳಗೊಂಡ ಮನವಿಯೊಂದನ್ನು ನೀಡಿರುವದಾಗಿ ಸಮಿತಿಯ ಅಧ್ಯಕ್ಷ ಕಟ್ಟಿ ಮಂದಯ್ಯ ಹಾಗೂ ಕಾರ್ಯಾಧ್ಯಕ್ಷ ಬಿ.ಎಸ್. ಕಾರ್ಯಪ್ಪ ತಿಳಿಸಿದ್ದಾರೆ. ಮನವಿಯಲ್ಲಿನ ಅಂಶ ಈ ಕೆಳಗಿನಂತಿದೆ.
ಸಾಲಮನ್ನಾ ವಿಚಾರದಲ್ಲಿ 14.7.18ರ ಅವಧಿಯವರೆಗಿನ ಸಾಲ ಪ್ರಮಾಣವನ್ನು ಕೊನೆಯ ದಿನಾಂಕ ಎಂದು ತೀರ್ಮಾನಿಸಿರುವುದು ಸಮಂಜಸವಲ್ಲ. ಇದರಿಂದ ಹೆಚ್ಚಿನ ಬೆಳೆಗಾರರು ಸಾಲಮನ್ನಾದಿಂದ ವಂಚಿತರಾಗಿದ್ದಾರೆ. ಹೆಚ್ಚಿನ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಸಾಲವನ್ನು ಜುಲೈ 14ರ ನಂತರ ಪಡೆದಿರುತ್ತಾರೆ.
ಸರಕಾರದ ಈಗಿನ ಸಾಲಮನ್ನಾ ಕ್ರಮದಿಂದ ಸಾವಿರಾರು ರೈತರು ಸಾಲಮನ್ನಾವನ್ನು ಪಡೆಯದೆ ಮತ್ತು ಸಾಲ ಮರುಪಾವತಿ ಮಾಡಲಾಗದೆ ಸಂಕಟದಲ್ಲಿದ್ದಾರೆ. ಸಾಲಮನ್ನಾಕ್ಕೆ ಇರುವ ಕೊನೆಯ ದಿನಾಂಕ ಅವಧಿಯನ್ನು ತೆಗೆದು ಹಾಕಿ ಸಾಲ ಪಡೆದ ಎಲ್ಲಾ ರೈತರಿಗೆ ಸಾಲಮನ್ನಾ ಸೌಲಭ್ಯ ಅಗತ್ಯವಿದೆ. ಬೆಳೆಗಾರರು ತೋಟ ಕೆಲಸಕ್ಕೆ ಕಾರ್ಮಿಕರ ತಮ್ಮ ಸ್ವಂತ ವಾಹನಗಳಲ್ಲಿ ಸಾಗಿಸಲು ನಿರ್ಬಂಧ ಹಾಕಿರುವದು ಕೂಡ ವಿಷಾದನೀಯ. ಕೊಡಗಿನ ಹೆಚ್ಚಿನ ಬೆಳೆಗಾರರು ಸಣ್ಣ ಹಿಡುವಳಿದಾರರಾಗಿದ್ದು, ಅವರಿಗೆ ಬಾಡಿಗೆ ವಾಹನಗಳಲ್ಲಿ ಕಾರ್ಮಿಕರನ್ನು ಕರೆತರುವದು ಸಾಮಾಥ್ರ್ಯವಿಲ್ಲವಾಗಿದೆ. ಬೆಳೆಗಾರರು ತಮ್ಮ ಸ್ವಂತ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಿಸಲು ಅನುವು ಮಾಡಿಕೊಡಬೇಕೆಂದು ವಿನಂತಿಸಿ, ಈ ಮನವಿಯ ಪ್ರತಿಯನ್ನು ಜಿಲ್ಲಾಧಿಕಾರಿ, ಎಸ್ಪಿ, ಆರ್ಟಿಓ ಮೊದಲಾದವರಿಗೆ ಕಳುಹಿಸಲಾಗಿದೆ.