ಕೂಡಿಗೆ, ನ. 21: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿ ಹೆಬ್ಬಾಲೆ ಉಪ ವಲಯದ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಕಳೆದ 5 ವರ್ಷಗಳ ಹಿಂದೆ ಪೈಸಾರಿ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿತ್ತು. ಆದರೆ, ಆರೋಗ್ಯ ಕೇಂದ್ರದ ಕಾಮಗಾರಿಯು ಶೇ. 80 ರಷ್ಟು ಮುಗಿದ ನಂತರ ಪಕ್ಕದಲ್ಲಿರುವ ಜಮೀನಿನವರು ಆ ಜಾಗವು ತಮಗೆ ಸೇರಬೇಕೆಂದು ನಾಲ್ಕು ವರ್ಷಗಳ ಹಿಂದೆಯೇ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೆ, ನ್ಯಾಯಾಲ ಯವು ಕಂದಾಯ ಇಲಾಖೆಗೆ ಇರುವ ಜಾಗದ ಬಗ್ಗೆ ಮಾಹಿತಿ ನೀಡಲು ಸೂಚನೆ ನೀಡಿದ್ದರು ಎಂದು ತಿಳಿದುಬಂದಿದೆ. ಆದರೆ, ಕಂದಾಯ ಇಲಾಖೆಯವರು ಇದುವರೆಗೂ ಯಾವದೇ ಕ್ರಮ ತೆಗೆದುಕೊಳ್ಳದೆ ಇರುವದರಿಂದ ರೂ. 30 ಲಕ್ಷ ವೆಚ್ಚದ ಕಟ್ಟಡ ಸಾರ್ವಜನಿಕರಿಗೆ ಸದುಪ ಯೋಗ ಆಗದೆ ದುಂದುವೆಚ್ಚ ವಾದಂತಾಗಿದ್ದು, ಗಿಡಗಂಟಿಗಳು ಕಟ್ಟಡದ ಸುತ್ತಲು ಬೆಳೆದು ನಿಂತಿದ್ದು ಇತ್ತ ಕಟ್ಟಡವು ಪಾಳು ಬಿದ್ದಿದೆ.

ಆರೋಗ್ಯ ಇಲಾಖೆಯವರು ಇದರತ್ತ ಗಮನಹರಿಸದೆ ಬಂದ ತಾಲೂಕು ಮಟ್ಟದ ಅಧಿಕಾರಿಗಳು ಸಮರ್ಪಕ ಮಾಹಿತಿ ಇಲ್ಲದೆ ತೆರಳುತ್ತಿರುವದು ಕಂಡುಬರುತ್ತಿದೆ. ಇದರಿಂದಾಗಿ ಇತ್ತ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ಒದಗಿಸಿದ್ದಲ್ಲಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರಕ್ಕೆ ಮುಕ್ತಿ ದೊರೆಯುತ್ತದೆ. ಇಲ್ಲದಿದ್ದಲ್ಲಿ ಸರ್ಕಾರದ ಹಣ ಹಾಗೆ ಉಪಯೋಗಕ್ಕೆ ಬಾರದೆ ದುಂದುವೆಚ್ಚ ವಾದಂತಾಗುತ್ತದೆ ಎಂಬದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಮದಲಾಪುರಕ್ಕೆ ರಸ್ತೆ ಕಾಮಗಾರಿ ವೀಕ್ಷಣೆಗೆ ತೆರಳಿದ ಸಂದರ್ಭ ಈ ವಿಚಾರವನ್ನು ಗಮನಕ್ಕೆ ತಂದು ಆದಷ್ಟು ಬೇಗ ಉಪ ಆರೋಗ್ಯ ಕೇಂದ್ರದ ಕಟ್ಟಡ ಸಮಸ್ಯೆಯನ್ನು ಪರಿಹರಿಸಿ, ಪಾಳುಬಿದ್ದಿರುವ ಕಟ್ಟಡದ ಕಾಮಗಾರಿಯನ್ನು ಪುನಃ ಕಾರ್ಯಗತಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇದಕ್ಕೆ ಸ್ಪಂದಿಸಿರುವ ಅಪ್ಪಚ್ಚು ರಂಜನ್, ನ್ಯಾಯಾಲಯ ಕಂದಾಯ ಇಲಾಖೆಗೆ ಕಳುಹಿಸಿರುವ ಕಡತವನ್ನು ಪರಿಶೀಲಿಸಿ ಸರ್ವೆ ಕಾರ್ಯ ಯಾವ ಹಂತದಲ್ಲಿದೆ. ಜಾಗವು ಪೈಸಾರಿಯೋ ಅಥವಾ ನ್ಯಾಯಾಲಯದಲ್ಲಿ ದಾವೆ ಹೂಡಿರುವ ವ್ಯಕ್ತಿಯ ಜಾಗವೋ ಎಂದು ಖಚಿತಪಡಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದರು.

- ಕೆ.ಕೆ. ನಾಗರಾಜಶೆಟ್ಟಿ.