ಚೆಟ್ಟಳ್ಳಿ, ನ. 21: ಕೊಡಗು ಸುನ್ನಿ ಯುವಜನ ಸಂಘದ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಕೊಡಗು ಸುನ್ನಿ ಯುವಕರ ಸಂಘ, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ರಿಯಾದ್ ಇವರ ವತಿಯಿಂದ ಸೌದಿ ಅರೇಬಿಯಾದ ಆಲ್ಮಾಸ್ ರೆಸಾರ್ಟ್‍ನಲ್ಲಿ ‘ಸಂದೇಶ ವಾಹಕರೆ ತಮಗೆ ಸಮರ್ಪಣೆ’ ಎಂಬ ಘೋಷಣಾ ವಾಕ್ಯದೊಂದಿಗೆ ಪ್ರವಾದಿ ಮೊಹಮ್ಮದ್ ಪೈಗಂಬರ್ (ಸ) 1494ನೇ ಜನ್ಮದಿನವನ್ನು ಆಚರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಸಯ್ಯದ್ ಅಬ್ದುಲ್ ಖಾದರ್ ತಂಗಳ್ ಅಯ್ಯಂಗೇರಿ ವಹಿಸಿದ್ದರು. ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಘಟಕದ ಅಧ್ಯಕ್ಷ ಫಾರೂಕ್ ಸಹದಿ ಮಾತನಾಡಿ, ಪ್ರವಾದಿಯವರ ಜೀವನ ಶೈಲಿಯನ್ನು ಇಂದಿನ ಯುವ ಸಮೂಹ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಕೊಡಗು ವೆಲ್ಫೇರ್ ಅಸೋಸಿಯೇಷನ್ ಸೌದಿ ಅರೇಬಿಯಾ ರಾಷ್ಟ್ರೀಯ ಕಾರ್ಯದರ್ಶಿ ಆಬಿದ್ ಕಂಡಕರೆ ಮಾತನಾಡಿ. ಎಂಟು-ಹತ್ತು ವರ್ಷಗಳಿಂದ ಕೊಡಗಿಗಾಗಿ ಸಂಘಟನೆ ನೀಡಿದ ಸಹಾಯಹಸ್ತವನ್ನು ವಿವರಿಸಿ ಕೊಡಗಿನ ಅಭಿವೃದ್ಧಿಗಾಗಿ ಸಂಘಟನೆಯೊಂದಿಗೆ ವಿದೇಶದಲ್ಲಿರುವ ಕೊಡಗಿನ ಯುವಕರು ಸದಸ್ಯತ್ವವನ್ನು ಪಡೆದು ಸಹಕರಿಸಬೇಕು ಎಂದು ಹೇಳಿದರು.
ಸಭೆಯನ್ನು ಸುಲೆಮಾನ್ ಸಹದಿ ಕಾಗಡಿಕಟ್ಟೆ ಉದ್ಘಾಟಿಸಿದರು. ಮದ್ರಸಾ ವಿದ್ಯಾರ್ಥಿಗಳಿಗೆ ಕಲಾಪ್ರತಿಭೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜೂನಿಯರ್, ಸೀನಿಯರ್ ವಿಭಾಗದಲ್ಲಿ ಕುರಾನ್ ಪಾರಾಯಣ ಹಾಗೂ ಹಾಡುಗಾರಿಕೆ ಸ್ಪರ್ಧೆಗಳು ನಡೆಯಿತು. ಕಾರ್ಯಕ್ರಮವನ್ನು ಮುಸ್ತಫಾ ಝೈನಿ ನಿರೂಪಿಸಿದರು. ಹಂಸ ಮುಸ್ಲಿಯಾರ್ ಸ್ವಾಗತಿಸಿ, ಅಬ್ದುಲ್ ಖಾದರ್ ವಂದಿಸಿದರು.
- ಕೆ.ಎಂ. ಇಸ್ಮಾಯಿಲ್ ಕಂಡಕರೆ