ಮಡಿಕೇರಿ, ನ. 21: ಕೊಡಗಿನಲ್ಲಿ ಭತ್ತ ಕಟಾವಿನ ದಿನಗಳು ಸಮೀಪಿಸುತ್ತಿವೆ. ಕೆಲವೇ ದಿನಗಳಲ್ಲಿ ರೈತರು ಬತ್ತ ಕೊಯ್ಯಲು ಪ್ರಾರಂಬಿಸುತ್ತಾರೆ. ಈ ಹಿನ್ನೆಲೆಯಲ್ಲಿ ರೈತರಿಂದ ಭತ್ತವನ್ನು ಸಂಗ್ರಹಿಸಲು ಹೋಬಳಿ ಮಟ್ಟದಲ್ಲಿ ಸಂಗ್ರಹಣಾ ಕೇಂದ್ರಗಳನ್ನು ತುರ್ತಾಗಿ ಸ್ಥಾಪಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಭತ್ತ ಮತ್ತಿತರ ಬೆಳೆಗಳಿಗೆ ಕೇಂದ್ರ ಸರಕಾರ ಈಗ ಘೋಷಿಸಿರುವ ಬೆಂಬಲ ಬೆಲೆ ಸಾಲದು. ಇಂದಿನ ವೆಚ್ಚಕ್ಕನುಗುಣವಾಗಿ ಬೆಂಬಲ ಬೆಲೆ ಭತ್ತಕ್ಕೆ ಕ್ವಿಂಟಾಲ್‍ಗೆ ಮೂರು ಸಾವಿರ ರೂ. ಘೋಷಿಸಬೇಕು. ಕೊಡಗಿನಲ್ಲಿ ಬಿಳಿಯ ಮತ್ತು ದೊಡ್ಡಿ -ಸ್ಥಳೀಯ ತಳಿಗಳಾಗಿದ್ದು ಹೆಚ್ಚಿಗೆ ಇವುಗಳನ್ನೇ ಬೆಳೆಸುತ್ತಿದ್ದು, ಇವುಗಳಿಗೆ ಹೆಚ್ಚಿನ ಬೆಂಬಲ ಬೆಲೆ ಘೋಷಿಸಬೇಕು, ಈ ವರ್ಷ ಅತಿವೃಷ್ಟಿಯಿಂದಾಗಿ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಅಡಿಕೆ, ಕರಿಮೆಣಸು, ಭತ್ತ ಎಲ್ಲ ಬೆಳೆಗಳು ಸಾಕಷ್ಟು ನಷ್ಟವಾಗಿವೆ. ತಗ್ಗು ಪ್ರದೇಶಗಳಲ್ಲಿ ಕಾಫಿ ಬೆಳೆ ಸಾಕಷ್ಟು ನಷ್ಟವಾಗಿದೆ. ಆದ ನಷ್ಟದ ಬಗ್ಗೆ ಸರಕಾರ ರೈತರಿಂದ ಅರ್ಜಿಗಳನ್ನು ಪಡೆದುಕೊಂಡಿದೆ. ಆದರೆ ಅರ್ಜಿ ಪಡೆದುಕೊಂಡು ಎರಡು ತಿಂಗಳುಗಳಾಗಿದ್ದರೂ ಆದ ನಷ್ಟವನ್ನು ವೀಕ್ಷಿಸಿ ಅಂದಾಜು ಮಾಡಿ ವಿವರಗಳನ್ನು ದಾಖಲಿಸಲು ಇಲಾಖಾಧಿಕಾರಿಗಳು ಇನ್ನೂ ಬಂದಿಲ್ಲ. ಕೆಲವು ಕಡೆಗಳಲ್ಲಿ ಕೃಷಿ ಇಲಾಖೆಯವರು ಬಂದಿದ್ದಾರೆ. ಆದರೆ ತೋಟಗಾರಿಕೆ ಇಲಾಖೆಯವರು ಮತ್ತು ಕಾಫಿ ಬೋರ್ಡ್‍ನವರು ಬಂದಿಲ್ಲ. ಇಲಾಖಾಧಿಕಾರಿಗಳು ತಕ್ಷಣವೇ ಸಮೀಕ್ಷೆ ನಡೆಸಬೇಕು. ಮತ್ತು ಆಗಿರುವ ನಷ್ಟವನ್ನು ಸರಕಾರ ಭರ್ತಿ ಮಾಡಬೇಕು.ಸರಕಾರ ಒಂದು ಎಕರೆಗೆ ಕನಿಷ್ಟ 50,000 ರೂ.ವಿನಿಂದ ಒಂದು ಲಕ್ಷ ರೂ.ವರೆಗೆ ಪರಿಹಾರ ನೀಡÀಬೇಕು; ಕೊಡಗಿನ ರೈತರಿಗೆ ಸಹಾಯ ಮಾಡಲೆಂದು ಬಂದ ಹಣವನ್ನು ರಸ್ತೆ ದುರಸ್ತಿ ಮಾಡಲು ಉಪಯೋಗಿಸುತ್ತಾರೆ. ಇದರಿಂದ ರೈತರಿಗೆ ಮೊತ್ತ ತಲಪುವದಿಲ್ಲ. ರೈತರಿಗೆ ಬಂದ ಹಣವನ್ನು ಬೇರೆಡೆಗೆ ಖರ್ಚು ಮಾಡಬಾರದು. ಅದು ರೈತರಿಗೇ ತಲುಪಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ರೈತರು ಸಾಕಷ್ಟು ಬಾರಿ ಬೇಡಿಕೆ ಮಂಡಿಸಿದ್ದರೂ ಕರಿಮೆಣಸು ಆಮದನ್ನು ಕೇಂದ್ರ ಸರಕಾರ ಇನ್ನೂ ತಡೆದಿಲ್ಲ. ಕೇಂದ್ರ ಸರಕಾರ ತಕ್ಷಣವೇ ಕರಿ ಮೆಣಸು ಆಮದನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕು ಎಂಬ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರ ಸಲ್ಲಿಸಲಾಯಿತು. ರೈತ ಸಂಘದ ಸಂಚಾಲಕ ಈ.ರ. ದುರ್ಗಾಪ್ರಸಾದ್, ಸದಸ್ಯರುಗಳಾದ ಕೆ.ಎ. ಹಂಸ ಮತ್ತು ಸಿ.ಎ. ಹಮೀದ್ ಇದ್ದರು.