ಕಣಿವೆ, ನ. 21: ಇಡೀ ದೇಶದಲ್ಲಿಯೇ ಕರ್ನಾಟಕ ಸಾರಿಗೆ ವ್ಯವಸ್ಥೆಗೆ ವಿಶೇಷವಾದ ಮಹತ್ವ ಇದೆ. ಈ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ರಾಜ್ಯೋತ್ಸವ ಮಾಸವಾದ ನವೆಂಬರ್ ಎಂದರೆ ಏನೋ ಒಂಥರ ಪುಳಕ. ಕುಶಾಲನಗರಕ್ಕೆ ಬೆಟ್ಟದಪುರದಿಂದ ನಿತ್ಯವೂ ಬರುವ ಸಾರಿಗೆ ಬಸ್ನ ಚಾಲಕ ಕೋಮ ಲಾಪುರ ಮಹೇಶ್, ನಿರ್ವಾ ಹಕ ನಟರಾಜು ಪ್ರತಿ ವರ್ಷದ ರಾಜ್ಯೋತ್ಸವದ ನವೆಂಬರ್ ಮಾಸದಲ್ಲಿ ಒಂದು ದಿನ ತಮ್ಮ ನಾಡ ಪ್ರೇಮ ಹಾಗೂ ಕನ್ನಡ ಪ್ರೇಮವನ್ನು ತಮಗೆ ಅನ್ನ ಕೊಡುವ ನಿತ್ಯವೂ ಸಂಚರಿಸುವ ಸಾರಿಗೆ ಬಸ್ ಅನ್ನು ಅಲಂಕರಿಸುವ ಮೂಲಕ ತೋರ್ಪಡಿಸುತ್ತಾರೆ.
ಬಸ್ ಅನ್ನು ತೊಳೆದು, ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಿ ನಾಡ ಧ್ವಜಗಳನ್ನು ಬಸ್ ಮೇಲೆ ಆರೋಹಣ ಮಾಡುವ ಮೂಲಕ ಅಭಿಮಾನ ಮೆರೆಯುತ್ತಾರೆ. ಕುಶಾಲನಗರದ ಸಾರಿಗೆ ನಿಲ್ದಾಣಕ್ಕೆ ಈ ಬಸ್ ಬಂದು ನಿಲುಗಡೆಗೊಂಡಾಗ ಈ ಅಲಂಕೃತ ಬಸ್ ಅನ್ನು ನೋಡಲು ಜನರಾಶಿಯೇ ಸೇರಿತ್ತು. ಬಸ್ ಅಲಂಕಾರದ ಮೂಲಕ ನಾಡ ಪ್ರೇಮಗೈದ ಚಾಲಕ ಹಾಗೂ ನಿರ್ವಾಹಕರಿಬ್ಬರನ್ನು ಇಲ್ಲಿನ ಜನರು ಅಭಿನಂದಿಸಿದರು.
ಈ ಸಂದರ್ಭ ಮಾತನಾಡಿದ ಚಾಲಕ ಮಹೇಶ್, ಸರ್ ಪ್ರತಿ ವರ್ಷದ ನವೆಂಬರ್ನಲ್ಲಿ ಒಂದು ದಿನ ರಾಜ್ಯೋತ್ಸವವನ್ನು ಆಚರಿಸುತ್ತೇವೆ. ಕಳೆದ ಮೂರು ವರ್ಷಗಳಿಂದ ನಾವಿಬ್ಬರು ಸೇರಿ ಇದನ್ನು ಆಚರಿಸುತ್ತಿದ್ದೇವೆ. ಇದಕ್ಕೆಂದೇ ನಮ್ಮ ಅಲ್ಪ ಸಂಬಳದ ಒಂದಷ್ಟು ಹಣವನ್ನು ಮೀಸಲಿಡುತ್ತೇವೆ. ಈ ಬಾರಿ ರೂ. 8 ಸಾವಿರ ಖರ್ಚು ಮಾಡಿ ನಮ್ಮ ಬಸ್ ಅನ್ನು ಅಲಂಕಾರ ಮಾಡಿ ದಿನವಿಡೀ ಅದೇ ನವೋಲ್ಲಾಸದೊಂದಿಗೆ ಕರ್ತವ್ಯ ಮಾಡಿದ್ದೇವೆ. ಬಸ್ ಚಲಿಸುವ ಗ್ರಾಮ ಗ್ರಾಮಗಳಲ್ಲಿ ಜನರು ಬಸ್ ನೋಡಿ ನಮ್ಮನ್ನು ಅಭಿನಂದಿಸುತ್ತಿದ್ದರು. ಕನ್ನಡ ನಾಡ ಗೀತೆಗಳನ್ನು ದಿನವೂ ಕೇಳಿಸಿದ್ದೇವೆ. ಕನ್ನಡಿಗರಿಗೆ ತಾಯಿ ಭುವನೇಶ್ವರಿ ಹೆತ್ತಮ್ಮನಷ್ಟೇ ಶ್ರೇಷ್ಟ ಅಲ್ಲವೇ. ಅದಕ್ಕೆ ನಾವು ಈ ಆಚರಣೆಯನ್ನು ಕರ್ತವ್ಯದೊಂದಿಗೆ ಮಾಡು ತ್ತಿದ್ದೇವೆ. ನಮ್ಮ ಈ ಕಾರ್ಯಕ್ಕೆ ನಮ್ಮ ಬಸ್ ಡಿಪೋದ ಮೇನೇಜರ್ ದರ್ಶನ್ ರಾಮಚಂದ್ರ ಅವರು ಉತ್ತೇಜನ ನೀಡುತ್ತಾ ಬಂದಿದ್ದಾರೆ. ಪ್ರತೀ ಹಳ್ಳಿ ಹಳ್ಳಿಗಳಲ್ಲಿ, ಪ್ರತೀ ವಾಹನಗಳಲ್ಲಿ ಕನ್ನಡ ನಾಡು ನುಡಿ ಪ್ರೇಮ ಮೊಳಗಬೇಕು ಎಂಬದು ನಮ್ಮ ಹೆಬ್ಬಯಕೆ ಎನ್ನುತ್ತಾರೆ ಮಹೇಶ್ ಹಾಗೂ ನಟರಾಜು.