ಶ್ರೀಮಂಗಲ, ನ. 21: ಪ್ರಸಕ್ತ ವರ್ಷದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಭೂಕುಸಿತದಿಂದ ಕಡಿತವಾಗಿದ್ದ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೊರಾಡು ಗ್ರಾಮದ ಮೂಲಕ ಬಿರುನಾಣಿ ಮತ್ತು ಹುದಿಕೇರಿಗೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆಯನ್ನು ಗ್ರಾ.ಪಂ.ನಿಂದ ಮರುಜೋಡಿಸುವ ಕಾಮಗಾರಿ ನಡೆಯಿತು.

ಆಗಸ್ಟ್ ತಿಂಗಳ ತೀವ್ರ ಮಳೆಯಿಂದ ಭೂಕುಸಿತ ಉಂಟಾಗಿ ಈ ರಸ್ತೆ ಸಂಪರ್ಕ ಕಡಿತವಾಗಿತ್ತು. ಇದರಿಂದ ಗ್ರಾಮಸ್ಥರು ಹೆಚ್ಚಿನ ಅಂತರದ ರಸ್ತೆಯನ್ನು ಅನಿವಾರ್ಯವಾಗಿ ಬಳಸುತ್ತಿದ್ದರು. ಭೂಕುಸಿತದ ಸ್ಥಳಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆಗಸ್ಟ್ ತಿಂಗಳಲ್ಲಿ ಭೇಟಿ ನೀಡಿ ಭೂ ಕುಸಿತದ ಮಣ್ಣನ್ನು ತೆರವುಗೊಳಿಸಿ ರಸ್ತೆ ಸಂಪರ್ಕ ಕಲ್ಪಿಸುವಂತೆ ಸೂಚಿಸಿದ್ದರು.

ಆದರೆ ಆ ಸಮಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದ ಪರಿಣಾಮ ಮತ್ತು ನೆಲದಲ್ಲಿ ಅತಿಯಾದ ತೇವಾಂಶದ ಕಾರಣ ಮಣ್ಣು ತೆರವುಗೊಳಿಸುವ ಯಂತ್ರಗಳು ಹೂತುಹೋದ ಹಿನ್ನೆಲೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಸ್ಥಳಕ್ಕೆ ಗ್ರಾ.ಪಂ. ಸದಸ್ಯ ಕಾಯಪಂಡ ಸುನಿಲ್ ಭೇಟಿ ನೀಡಿ ಪರಿಶೀಲಿಸಿದರು. ಈ ರಸ್ತೆ ಹಲವು ವರ್ಷಗಳಿಂದ ಅನುದಾನ ಇಲ್ಲದೆ ಸುಧಾರಣೆಗೊಂಡಿಲ್ಲ. ರಸ್ತೆ ತುಂಬ ಹದಗೆಟ್ಟಿದು ನಮ್ಮ ಗಮನದಲ್ಲಿದೆ. ಆದ್ದರಿಂದ ಈ ರಸ್ತೆಗೆ ಗ್ರಾ.ಪಂ.ಯಿಂದ ಉದ್ಯೋಗ ಖಾತ್ರಿ ಯೋಜನೆಯಿಂದ ಸೂಕ್ತ ಅನುದಾನದಡಿ ಕ್ರೀಯಾ ಯೋಜನೆ ರೂಪಿಸಿ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವದು. ಈಗಾಗಲೇ ಈ ರಸ್ತೆ ಅಭಿವೃದ್ಧಿಗೆ ಕ್ರಿಯಾ ಯೋಜನೆಯಲ್ಲಿ ರೂ. 5 ಲಕ್ಷದ ಕಾಮಗಾರಿಗೆ ಸೇರಿಸಲಾಗಿದೆ. ಇದಲ್ಲದೆ ಇನ್ನೂ ಹೆಚ್ಚಿನ ಅನುದಾನ ಈ ರಸ್ತೆಗೆ ಒದಗಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.