ಸೋಮವಾರಪೇಟೆ, ನ. 21: ಹೊರ ದೇಶಗಳ ನುಸುಳುಕೋರರನ್ನು ತಡೆಗಟ್ಟಿ ದೇಶದ ಸುರಕ್ಷತೆಯನ್ನು ಕಾಪಾಡುವ ಸಲುವಾಗಿ ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ ನಡೆಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದ್ದು, ಈ ಸಂಬಂಧಿತ ಮನವಿಯನ್ನು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.

ಅಸ್ಸಾಂನಲ್ಲಿ ನಡೆಸಿದ ಪೌರತ್ವ ನೋಂದಣಿಯಿಂದ 11,06,657 ಮಂದಿ ನುಸುಳುಕೋರರು ಇರುವದು ಪತ್ತೆಯಾಗಿದೆ. ಬಾಂಗ್ಲಾದೇಶದಿಂದ ನುಸುಳುಕೋರರ ಸೋಗಿನಲ್ಲಿ ಭಯೋತ್ಪಾದಕರು ದೇಶದೊಳಗೆ ಬರುತ್ತಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳ ವರದಿ ನೀಡಿದೆ. ಇದರೊಂದಿಗೆ ದೇಶದ ವಿವಿಧ ರಾಜ್ಯಗಳಲ್ಲೂ ನುಸುಳುಕೋರರು ಅಡಗಿದ್ದು, ಇವರನ್ನು ಪತ್ತೆಹಚ್ಚಿ ಹೊರದಬ್ಬಲು ನೋಂದಣಿ ಕಾರ್ಯ ಸಹಾಯಕವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.

ಇದರೊಂದಿಗೆ ಉತ್ತರ ಪ್ರದೇಶದಲ್ಲಿ ನಡೆದ ಹಿಂದೂ ಸಂಘಟನೆಯ ಮುಖಂಡ ಕಮಲೇಶ ತಿವಾರಿ ಹತ್ಯೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಆಗ್ರಹಿಸಿ ಮನವಿ ಪತ್ರವನ್ನು ತಹಶೀಲ್ದಾರ್ ಗೋವಿಂದರಾಜು ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಈ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ಕಾಗಡಿಕಟ್ಟೆ ಸಂತೋಷ್, ದಿನೇಶ್, ಸುರೇಶ್, ಮೋಹನ್, ನೇಗಳ್ಳೆ ಕುಮಾರ್, ಆಲ್ವಿನ್, ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.